ದೊಡ್ಡಬಳ್ಳಾಪುರ: ದೇವಸ್ಥಾನಕ್ಕೆಂದು ಟಿವಿಎಸ್ ಮೊಪೆಡ್ನಲ್ಲಿ ಹೊರಟ್ಟಿದ್ದ ದಂಪತಿಗಳ ಮೇಲೆ ಕ್ಯಾಂಟರ್ ಹರಿದು, ವಯೋವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲಗೇಟ್ ಬಳಿ ಸೋಮವಾರ ರಾತ್ರಿ ನಡೆದಿದೆ.
ರಾಮದೇನಹಳ್ಳಿಯ ಅಂದಾನಪ್ಪ (60), ನಾಗರತ್ನ(58) ಮೃತ ದುರ್ದೈವಿಗಳು. ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್ಗೆ ಡಿಕ್ಕಿ ಹೊಡೆದ ಕ್ಯಾಂಟರ್, ಅಪಘಾತದ ಬಳಿಕ ಚಾಲಕ ಕ್ಯಾಂಟರ್ ಅನ್ನು ಸ್ಥಳದಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ನೆಲಮಂಗಲ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಕಲ್ಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬೆಳವಂಗಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ದಂಪತಿ ಊರೂರಿಗೆ ಹೋಗಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ರಾತ್ರಿ ಅವರು ಮಧುರೆ ಶನಿ ಮಹಾತ್ಮ ದೇವಸ್ಥಾನಕ್ಕೆ ಹೋಗಲು ರಾಮದೇನಹಳ್ಳಿಯಿಂದ ಹೊರಟ್ಟಿದ್ದರು. ಕನ್ನಮಂಗಲ ಗೇಟ್ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಮುಖ್ಯರಸ್ತೆಗೆ ಬರುವ ವೇಳೆ ದೊಡ್ಡಬಳ್ಳಾಪುರ ಕಡೆಯಿಂದ ಬಂದ ಕ್ಯಾಂಟರ್ ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
Laxmi News 24×7