ಬಳ್ಳಾರಿ, ನವೆಂಬರ್ 09: ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯುವ ಹಕ್ಕನ್ನು ಕಳೆದುಕೊಂಡಿದ್ದಾರೆ ಮತ್ತು ಮುಂದಿನ 15 ರಿಂದ 20 ದಿನಗಳಲ್ಲಿ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಭವಿಷ್ಯ ನುಡಿದಿದ್ದಾರೆ.
ಸಂಡೂರು ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೈಲಿಗೆ ಹೋಗುವ ಕಾಲ ದೂರವಿಲ್ಲ. ಸಿದ್ದರಾಮಯ್ಯನವರು ಮತ್ತು ಅವರ ಪತ್ನಿ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ ಎಂದು ಹೇಳಿದರು.
ಮೈಸೂರು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಾವು ಒತ್ತಾಯಿಸಿದ್ದೇವೆ. ಸಿಬಿಐ ತನಿಖೆಗೆ ವಹಿಸಿದ 24 ಗಂಟೆಗಳಲ್ಲಿ ಮುಖ್ಯಮಂತ್ರಿಯನ್ನು ಬಂಧನ ಮಾಡಿ ಜೈಲಿಗೆ ಕಳುಹಿಸುವುದು ನಿಶ್ಚಿತ. ಹಣ, ಹೆಂಡ, ಅಧಿಕಾರದ ಬಲದಿಂದ ಹಾಗೂ ಜಾತಿ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಕಾಲ ಹೋಗಿದೆ. ಸಿದ್ದರಾಮಯ್ಯನವರೇ, ಇವತ್ತು ಜನ ಜಾಗೃತರಾಗಿದ್ದಾರೆ. ನಿಮ್ಮ ಮೋಸಕ್ಕೆ ಬಲಿ ಆಗುವುದಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುವ ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರು ಹನುಮಂತು ಅವರ ಚಿಹ್ನೆ ಕಮಲದ ಹೂವಿನ ಗುರುತಿಗೆ ಮತ ಕೊಡಿ. ಹಳ್ಳಿಗಳಿಗೆ ತೆರಳಿ ಬಿಜೆಪಿ ಪರವಾಗಿ ಪ್ರಚಾರ ಮಾಡಬೇಕೆಂದು ಮನವಿ ಮಾಡಿದರು. ಬಂಗಾರು ಹನುಮಂತು ಅವರನ್ನು ಗೆಲ್ಲಿಸುವ ಉದ್ದೇಶದಿಂದ ಯಡಿಯೂರಪ್ಪ ಇಲ್ಲಿಗೆ ಬಂದಿದ್ದು, ಅದಕ್ಕಾಗಿ ನಮ್ಮೆಲ್ಲ ಬಂಧುಗಳು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು ಎಂದು ಬಿ ಎಸ್ ಯಡಿಯೂರಪ್ಪ ಅವರು ಹೇಳಿದರು.