ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ಆರಂಭಗೊಂಡಿದೆ. ನಾನಾ ಕ್ಷೇತ್ರದ 17ಮಂದಿ ಸ್ಪರ್ಧಿಗಳು ʼಸ್ವರ್ಗ – ನರಕʼದ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ದಿನದಂದಲೇ ಬಿಗ್ ಬಾಸ್ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ.
ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ – ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ.
ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್ ಬಾಸ್ ಮನೆ ಈ ಬಾರಿಯೂ ಹುಲಿ ಉಗುರಿನ ವಿಚಾರದಿಂದ ಸುದ್ದಿ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕ ಮೂಲದಿಂದ ಬಂದು ಬಿಗ್ ಬಾಸ್ ಮನೆಯೊಳಗೆ ಹೋಗಿರುವ ʼಗೋಲ್ಡ್ ಸುರೇಶ್ʼ.
ಬಿಗ್ ಬಾಸ್ ಈ ಬಾರಿ ಪ್ರಿಮಿಯರ್ ಆಗುವ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿತ್ತು. ಅದರಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಅವರೊಂದಿಗೆ ʼಗೋಲ್ಡ್ ಸುರೇಶ್ʼ ಕೂಡ ಇದ್ದರು.
ಬೆಳಗಾವಿ ಮೂಲದವರಾದ ಗೋಲ್ಡ್ ಸುರೇಶ್ ಮೈತುಂಬಾ ಚಿನ್ನಾಭರಣ ತೊಟ್ಟಿಕೊಂಡೇ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅವರನ್ನು ನೋಡಿ ಇವರು ವರ್ತೂರು ಸಂತೋಷ್ 2.0 ಎಂದು ಕಮೆಂಟ್ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್ ಕೂಡ ಇದೇ ರೀತಿ ಚಿನ್ನವನ್ನು ಧರಿಸಿಕೊಂಡು ದೊಡ್ಮನೆಯೊಳಗೆ ಹೋಗಿದ್ದರು.
ಆದರೆ ಕೆಲ ಸಮಯದ ಬಳಿಕ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಗೆ ಅಧಿಕಾರಿಗಳ ಅವರ ವಿರುದ್ಧ ದೂರು ದಾಖಲಿಸಿಕೊಂಡು, ಬಿಗ್ ಬಾಸ್ ಮನೆಯಿಂದಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ವಿಚಾರಣೆ ಎದುರಿಸಿ ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.