ಬೆಂಗಳೂರು, ಅಕ್ಟೋಬರ್ 01: ಸಿಎಂ ತಮ್ಮ ಸ್ಥಾನದಿಂದ ಇಳಿಯುವುದನ್ನೇ ಕಾಂಗ್ರೆಸ್ ಪಕ್ಷದ ಕೆಲವರು ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತರಾದ ಮಹದೇವಪ್ಪ ಅವರು ಹೇಳಿದ್ದಾರೆ. ಅದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ‘ ಸಿದ್ದರಾಮಯ್ಯನವರು ಇವತ್ತು ಇರ್ತಾರೆ, ನಾಳೆ ಹೋಗ್ತಾರೆ’ ಎಂದಿದ್ದಾರೆ.
ಇದು ನಿರ್ಗಮನದ ಮುನ್ಸೂಚನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಸಿಎಂ ಶಿವಕುಮಾರ್ ಅವರು ಗೌಪ್ಯವಾಗಿ ಪರಮೇಶ್ವರರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದಾರೆ. ಶಿವಕುಮಾರ್, ಪರಮೇಶ್ವರ್ ಅವರು, ಇನ್ನೂ ಕೂಡ ಸಿದ್ದರಾಮಯ್ಯರನ್ನು ರಕ್ಷಿಸಲು ಸಾಧ್ಯವಿಲ್ಲ. ಕಷ್ಟ ಆಗುತ್ತಿದೆ, ಪಕ್ಷಕ್ಕೂ ಮುಜುಗರ ಆಗುತ್ತಿದೆ. ಸಿದ್ದರಾಮಯ್ಯರು ಬೇಗ ರಾಜೀನಾಮೆ ಕೊಟ್ಟರೆ ಅಷ್ಟೇ ಒಳಿತೆಂಬ ವಿಚಾರ ಚರ್ಚೆ ಆಗಿದೆ ಎಂಬ ವಿಚಾರ ನಮಗೆ ಲಭಿಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿಯ ಹಗರಣ, ಮೈಸೂರು ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣದ ದುರುಪಯೋಗ-ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಮುಖ್ಯಮಂತ್ರಿಗಳ ಕುಟುಂಬದ ಬಗ್ಗೆ ಆರೋಪ ಬಂದಾಗ ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಕಿಂಚಿತ್ತು ಕೂಡ ಬೆಲೆ ಕೊಡದೆ ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಕಪ್ಪು ಚುಕ್ಕಿ ಇರಲಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದರು ಎಂದು ಆಕ್ಷೇಪಿಸಿದರು.