ಚಿಕ್ಕೋಡಿ: ಪರಿಶಿಷ್ಟ ಜಾತಿ ಗುತ್ತಿಗೆದಾರನೆಂದು ನಕಲಿ ದಾಖಲೆ ಸೃಷ್ಟಿಸಿ ಈ-ಪ್ರೋಕ್ ವೆಬ್‍ಸೈಟ್ ಮೂಲಕ ಟೆಂಡರ್ ಹಾಕಿದ್ದ ಧಾರವಾಡ ಮೂಲದ ಬಾಲಕೃಷ್ಣ ಬಸವರಾಜ ಚೊಳಚಗುಡ್ಡ ಎಂಬುವರ ವಿರುದ್ಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗರಾವ್ ಆ.
4 ರಂದು ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಪಿಎಸ್‍ಐ ಬಸಗೌಡ ನೇರ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನೀರು ಪೂರೈಸಲು ನಲ್ಲಿ ಕೂಡಿಸಲು ರಾಯಬಾಗ ತಾಲ್ಲೂಕಿನ ಅಳಗವಾಡಿಯಲ್ಲಿ ₹ 29.5 ಲಕ್ಷ ಹಾಗೂ ಅಲಖನೂರಿನಲ್ಲಿ ₹ 17.90 ಲಕ್ಷದ ಕಾಮಗಾರಿಗೆ ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿತ್ತು. ಬಾಳಕೃಷ್ಣ ಚೊಳಚಗುಡ್ಡ ತಾನೊಬ್ಬ ಪರಿಶಿಷ್ಟ ಜಾತಿಯವ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು.
ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಚಿಕ್ಕೋಡಿ ವಿಭಾಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಕಾರಿ ಎಂಜಿನಿಯರ್, ರಾಯಬಾಗ ತಾಲ್ಲೂಕು ಪಂಚಾಯಿತಿ ಕಚೇರಿ, ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡ ನೀಡಿದ ವರದಿಯನ್ವಯ ಬಾಳಕೃಷ್ಣ ಅವರು ನಕಲಿ ದಾಖಲೆ ಸೃಷ್ಟಿಸಿ ಟೆಂಡರ್ ಹಾಕಿದ್ದರು ಎಂದು ತಿಳಿದಿದೆ.