ಚನ್ನಮ್ಮನ ಕಿತ್ತೂರು: ಹುಲಿಕೆರೆ ಹಿನ್ನೀರಿನಿಂದಾಗಿ ಟ್ಯೂಬ್ ತೆಪ್ಪದಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಂಗಾಪುರದ ಮಕ್ಕಳು ಮತ್ತು ನಾಗರಿಕರ ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.
ಈ ಗ್ರಾಮಸ್ಥರ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ಆ.6ರ ಸಂಚಿಕೆಯಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಪಯಣ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ಜಿಲ್ಲಾಡಳಿತ, ಆ ಊರಿಗೆ ಫೈಬರ್ ದೋಣಿಯ ವ್ಯವಸ್ಥೆ ಮಾಡಿತು. ಮಂಗಳವಾರ ಸಂಜೆ ತಾಲ್ಲೂಕು ಆಡಳಿತ ಸೌಧಕ್ಕೆ ಬಂದಿದ್ದ ದೋಣಿ ಹೊತ್ತು ತಂದ ವಾಹನ, ರಾತ್ರಿ ನಿಂಗಾಪುರಕ್ಕೆ ತಲುಪಿತು.
ಶಾಸಕರ ಭೇಟಿ: ಶಾಸಕ ಬಾಬಾಸಾಹೇಬ ಪಾಟೀಲ, ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ ಘೋರ್ಪಡೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ಮಿರಜಕರ, ಬಿಇಒ ಚನ್ನಬಸಪ್ಪ ತುಬಾಕಿ ಅವರು, ನಿಂಗಾಪುರ ಬಳಿಯ ಹುಲಿಕೆರೆ ಹಿನ್ನೀರು ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
‘ಈ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಬಾಬಾಸಾಹೇಬ ಭರವಸೆ ನೀಡಿದರು. ಅವರು ಭರವಸೆ ನೀಡಿದ ಸುಮಾರು 6 ಗಂಟೆಯೊಳಗೆ ದೋಣಿ ಬಂದಿತು. ಬುಧವಾರದಿಂದ ಈ ದೋಣಿ ಮೇಲಿನ ಸಂಚಾರ ಆರಂಭವಾಗಲಿದೆ.
‘ಹಿನ್ನೀರು ಸರಿದ ನಂತರ, ಸೇತುವೆ ಸಂಪರ್ಕದ ವ್ಯವಸ್ಥೆಯನ್ನು ನಿಂಗಾಪುರ ಗ್ರಾಮಸ್ಥರಿಗೆ ಮಾಡಿಕೊಡಲಾಗುವುದು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆ. ಸೇತುವೆ ನಿರ್ಮಾಣವಾದರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ಬಾಬಾಸಾಹೇಬ ತಿಳಿಸಿದರು.
Laxmi News 24×7