ಮೈಸೂರು, ಜೂನ್ 04: ಮೈಸೂರು ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಗರ ಸಾರಿಗೆ ಸೇವೆಯನ್ನು ನೀಡುತ್ತಿದೆ. ಈ ಸೇವೆಗೆ ಅನುಕೂಲವಾಗಲು ರಾಜ್ಯ ಸರ್ಕಾರ 50 ಹೊಸ ಬಸ್‌ಗಳನ್ನು ನೀಡಿದೆ.
ನಗರದ ಹಲವು ಮಾರ್ಗಗಳಲ್ಲಿ ಸಂಚಾರ ನಡೆಸುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳು ಹಳೆಯದಾಗಿವೆ.
ಕೆಎಸ್‌ಆರ್‌ಟಿಸಿ ನಿಯಮದಂತೆ ಬಸ್‌ಗಳನ್ನು ಬದಲಾವಣೆ ಮಾಡಬೇಕಿದೆ. ಆದ್ದರಿಂದ ಹೊಸ ಬಸ್ ಮಂಜೂರು ಮಾಡಲಾಗಿದೆ.
ಮಹಿಳೆಯರ ಉಚಿತ ಬಸ್ ಪ್ರಯಾಣ ‘ಶಕ್ತಿ’ ಯೋಜನೆ ಆರಂಭವಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ಹಳೆಯ ಬಸ್‌ಗಳನ್ನು ಸ್ಕ್ರಾಪ್ ಮಾಡಿ, ಆ ಮಾರ್ಗದಲ್ಲಿ ಹೊಸ ಬಸ್‌ಗಳನ್ನು ಓಡಿಸಲಾಗುತ್ತದೆ. ಇದಕ್ಕಾಗಿ 50 ಬಸ್‌ಗಳನ್ನು ಮಂಜೂರು ಮಾಡಲಾಗಿದೆ.
ಕಡಿಮೆ ಬಸ್‌ಗಳಿವೆ ಎಂಬ ಆರೋಪ: ಮೈಸೂರು ನಗರದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈಗ ಹಳೆಯ ಬಸ್‌ಗಳನ್ನು ಸ್ಕ್ರಾಪ್ ಮಾಡಿದರೆ ಮತ್ತಷ್ಟು ಬಸ್‌ಗಳ ಕೊರತೆ ಉಂಟಾಗುತ್ತಿತ್ತು. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತವರು ನಗರಕ್ಕೆ 50 ಹೊಸ ಬಸ್‌ಗಳನ್ನು ಮಂಜೂರು ಮಾಡಿಸಿದ್ದಾರೆ.