Breaking News

ತುಂಬಿದ ಕೃಷ್ಣಾ ನದಿ: ಕುಡಚಿ ಉಗಾರ ಸೇತುವೆ ಮುಳುಗಡೆ, ಸಂಚಾರ ಬಂದ್

Spread the love

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳ ಆಗಿದೆ. ಪರಿಣಾಮ ಮಹಾರಾಷ್ಟ್ರ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಉಗಾರ ಸೇತುವೆ ಮುಳುಗಡೆಯಾಗಿದ್ದು, ಗಡಿಭಾಗದ ಪ್ರಮುಖ ಸಂಪರ್ಕ ಸೇತುವೆ ಬಂದ್ ಆಗಿದೆ.

ಕುಡಚಿ ಉಗಾರ ಸೇತುವೆ ಮುಳುಗಡೆ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸಮೀಪದಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ – ಉಗಾರ ಸೇತುವೆ ಮಂಗಳವಾರ ಮಧ್ಯಾಹ್ನ ಸಂಪೂರ್ಣ ಮುಳುಗಡೆ ಆಗಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರವನ್ನು ನಿಷೇಧಿಸಿ ಬೆಳಗಾವಿ ಜಿಲ್ಲಾಡಳಿತ ಆದೇಶಿಸಿದೆ. ಎರಡು ಕಡೆ ಯಾರು ತೆರಳದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಿದ್ದಾರೆ. ಎರಡು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಪರ್ಯಾಯ ಮಾರ್ಗಗಳಿದ್ದು, ಅವುಗಳ ಮೂಲಕ ಸಂಚರಿಸಬೇಕೆಂದು ಬೆಳಗಾವಿ ಜಿಲ್ಲಾ ಆಡಳಿತ ಸೂಚಿಸಿದೆ.

ಸಂಚಾರ ಬಂದ್: ಈ ವಿಷಯಕ್ಕೆ ಸಂಬಂಧಿಸಿದಂತೆ ರಾಯಬಾಗ ತಹಶೀಲ್ದಾರ್ ಸುರೇಶ್ ಮುಂಜೆ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, “ವಾಡಿಕೆಯಂತೆ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಕುಡಚಿ ಉಗಾರ ಸೇತುವೆ ಮುಳುಗಡೆಯಾಗಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ. ಈ ಎರಡು ಪಟ್ಟಣಗಳಿಗೆ ಸಂಚರಿಸಲು ಪರ್ಯಾಯ ಮಾರ್ಗಗಳಿದ್ದು, ಅಲ್ಲಿಂದ ವಾಹನ ಸವಾರರು ಸಂಪರ್ಕ ಪಡೆಯಬಹುದು” ಎಂದರು.

“ರಾಯಬಾಗ ತಾಲೂಕಿನಲ್ಲಿ ಪ್ರವಾಹ ಎದುರಿಸಲು ಎಲ್ಲಾ ರೀತಿಯಿಂದಲೂ ನಾವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಯಾವುದೇ ಪ್ರವಾಹ ಭೀತಿ ಇಲ್ಲ, ಕೃಷ್ಣಾ ನದಿಯಲ್ಲಿ 1.30 ಲಕ್ಷ ಕ್ಯೂಸೆಕ್ ಒಳ ಹರಿವು ಹೆಚ್ಚಿದೆ. ಇದು 1.70 ಲಕ್ಷ ಕ್ಯೂಸೆಕ್ ದಾಟಿದರೆ ನಮ್ಮ ತಾಲೂಕಿನ ಕೆಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುತ್ತದೆ. ಜಿಲ್ಲಾಡಳಿತ ಈಗಾಗಲೇ ಸಕಲ ರೀತಿಯಲ್ಲೂ ಸಿದ್ಧಗೊಂಡಿದೆ. ನಾವು ಕೂಡ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ” ಎಂದ ತಿಳಿಸಿದರು.

“ಹಳೆ-ದಿಗ್ಗೇವಾಡಿ, ಗುಂಡವಾಡ, ಶಿರಗೂರ, ಖೇಮಲಾಪೂರ, ಸಿದ್ದಾಪೂರ, ಸವದತ್ತಿ, ಚಿಂಚಲಿ, ಭೀರಡಿ, ಜಲಾಲಪೂರ, ನಸಲಾಪೂರ, ಕುಡಚಿ, ಪರಮಾನಂದವಾಡಿ, ಹಾರೂಗೇರಿ, ಬೆಕ್ಕೇರಿ, ಯಬರಟ್ಟಿ, ಸುಟ್ಟಟ್ಟಿ , ನಮ್ಮ ತಾಲೂಕಿನಲ್ಲಿ 16 ಹಳ್ಳಿಗಳು ಕೃಷ್ಣಾ ನದಿಯ ಪ್ರವಾಹಕ್ಕೆ ಒಳಪಡುತ್ತವೆ. ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದ ಗ್ರಾಮಸ್ಥರು ನದಿ ದಂಡೆಗೆ ಜಾನುವಾರಗಳನ್ನು ಮತ್ತು ಬಟ್ಟೆ ತೊಳೆಯುವುದಕ್ಕೆ ಹೋಗಬಾರದು” ಎಂದು ತಹಶೀಲ್ದಾರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಹಲಕರ್ಣಿ ಗ್ರಾಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ

Spread the loveಹಲಕರ್ಣಿ ಗ್ರಾಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ ಮೂಲಭೂತ ಸೌಲಭ್ಯಗಳಿಗೆ ಸ್ಪಂದಿಸಿದ ಅಧಿಕಾರಿಯ ವರ್ಗಾವಣೆ!!! ಖಾನಾಪೂರ ತಾಲೂಕಿನ ಹಲಕರ್ಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ