ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವಂತಹ ಪರಿಸ್ಥಿತಿ ಕಾಂಗ್ರೆಸ್ ಮುಖಂಡರದ್ದಾಗಿದೆ ಎಂದು ಟೀಕಿಸಿದರು. ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸಲಾಗುವುದು. ಮೇ ಅಂತ್ಯಕ್ಕೆ ರಾಜ್ಯದ ಗ್ರಾಮ ಪಂಚಾಯ್ತಿ ಸದಸ್ಯರ ಅಧಿಕಾರ ಅವಧಿ ಮುಗಿದರೇ, ಕೆಲವು ಗ್ರಾಮ ಪಂಚಾಯ್ತಿಗಳಿಗೆ ಡಿಸೆಂಬರ್ ಅಂತ್ಯಕ್ಕೆ ಅಧಿಕಾರ ಮುಗಿಯಲಿದೆ ಎಂದರು.
ಕೇವಲ ಬಿಜೆಪಿ ಸದಸ್ಯರೇ ಪಂಚಾಯ್ತಿ ನಾಮಕರಣವಾಗಬೇಕು ಎಂಬ ಉದ್ದೇಶ ಬಿಜೆಪಿಯದ್ದಿಲ್ಲ. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ಯವರು ಗಾಬರಿಯಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾ.ಪಂ. ಸದಸ್ಯರ ಅಧಿಕಾರ ಮೊಟಕುಗೊಳಿಸಲಾಗುತ್ತಿದೆ ಎಂದು ಅವರಿಬ್ಬರು ಆಪಾದಿಸುತ್ತಿದ್ದಾರೆ. ಈ ಮಾತನ್ನ ಹೇಳಲು ಇವರಿಗೆ ನಾಚಿಕೆಯಾಗಬೇಕು. ಇವರಿಗೆ ಈ ಮಾತನ್ನು ಹೇಳಲು 1 ಪರ್ಸೆಂಟಷ್ಟು ಕೂಡ ಅಧಿಕಾರವಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ಸಿನವರು ಕೇವಲ ಕಾಂಗ್ರೆಸ್ ಸದಸ್ಯರನ್ನೇ ಶಿವಮೊಗ್ಗ ನಗರಸಭೆಗೆ ನಾಮ ನಿರ್ದೇಶನ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಹೀಗಾಗಿ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಪ್ರಶ್ನಿಸಲು ನೈತಿಕತೆ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಇದೇ ಭಯ, ಆತಂಕ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿ.ಯವರನ್ನು ಕಾಡುತ್ತಿದೆ. ಆದರೆ ಬಿಜೆಪಿ ಇಂತಹ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಸರ್ಕಾರ ಚುನಾವಣಾ ಆಯೋಗಕ್ಕೆ ಚುನಾವಣಾ ನಡೆಸುತ್ತೀರಾ ಅಥವಾ ಮುಂದೂಡುವುದಾ ಎಂಬ ಬಗ್ಗೆ ಪತ್ರ ಬರೆದಿದೆ. ಒಂದು ವೇಳೆ ಮುಂದುವರಿಸಿದರೆ ಪಂಚಾಯ್ತಿಗಳಿಗೆ ನಾಮನಿರ್ದೇಶನ ಮಾಡುವುದು ಅಥವಾ ಇರುವ ಸದಸ್ಯರನ್ನೇ ಮುಂದುವರಿಸುವುದು ಅಥವಾ ಆಡಳಿತಾಧಿಕಾರಿ ನೇಮಕ ಮಾಡುವುದು ಈ ಮೂರಕ್ಕೂ ನಾವು ತಾಯಾರಾಗಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಚುನಾವಣೆ ನಡೆಸುತ್ತೇವೆ ಎಂದರೆ ಅದಕ್ಕೂ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದ್ದು ಮುಂದಿನ ದಿನಗಳಲ್ಲಿ ಪಂಚಾಯ್ತಿಗಳಿಗೆ ಸದಸ್ಯರನ್ನು ನಾಮಕರಣ ಮಾಡಲು ಡಿಸಿಯವರಿಗೆ ಅಧಿಕಾರ ನೀಡುತ್ತೇವೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ.