ಉಳ್ಳಾಲ: ವಿದೇಶದಲ್ಲಿ ಅತ್ಯುನ್ನತ ಶಿಕ್ಷಣ ಪಡೆದ ಬಳಿಕ ಅತ್ಯುನ್ನತ ಸ್ಥಾನ ಅಲಂಕರಿಸುವ ಅವಕಾಶವಿದ್ದರೂ ಡಾ| ಬಿ.ಆರ್. ಆಂಬೇಡ್ಕರ್ ಅವರು ತನ್ನ ಮತ್ತು ತನ್ನ ಪರಿವಾರದ ಸುಖಜೀವನವನ್ನು ನಿರ್ಲಕ್ಷಿಸಿ ಸಮಾಜದ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮಾನತೆ, ಸಾಮರಸ್ಯ ತರಲು ಪ್ರಯತ್ನಿಸಿದವರು.
ಚಿಂತನೆ ಅವರು ರಚಿಸಿದ ಸಂವಿಧಾನದಲ್ಲೂ ಪ್ರತಿಫಲಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳ ಜಾರಿ ಅಗತ್ಯವಾಗಿದ್ದು, ಅಂಬೇಡ್ಕರ್ ಅವರನ್ನು ಅರಿಯುವ ಕೆಲಸವಾಗಲಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 66ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕಿರಣದ ಎದುರು ಡಾ| ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ 14.30 ಲಕ್ಷ ರೂ. ವಚ್ಚದಲ್ಲಿ ಸ್ಥಾಪಿಸಲಾಗಿರುವ ಬಾಬಾಸಾಹೇಬರ 9 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಂಗಳಾ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಂಡನ್ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆದ ಬಳಿಕ ಅವರು ವಿದೇಶದಲ್ಲಿಯೇ ಅತ್ಯುನ್ನತ ಹುದ್ದೆ ಪಡೆದು ಸಂತೋಷದ ಜೀವನ ಕಳೆಯ ಬಹುದಿತ್ತು. ಭಾರತದಲ್ಲಿಯೂ ಸರಕಾರಿ ಉದ್ಯೋಗದ ಅವಕಾಶವಿತ್ತು. ಆದರೆ ಅದಾವುದನ್ನೂ ಬಯಸದೆ ಆಗಿನ ಕಾಲದಲ್ಲಿದ್ದ ಧಾರ್ಮಿಕ, ಸಾಮಾಜಿಕ, ರಾಜಕೀಯ ಅಸಮಾನತೆಯನ್ನು ತಿದ್ದುವ ಕಾರ್ಯ ಮಾಡಿದರು. ಅವರು ರಚಿಸಿದ ಸಂವಿಧಾನ ವಿಶ್ವದ ಎಲ್ಲ ರಾಷ್ಟ್ರಗಳ ಸಂವಿಧಾನಕ್ಕಿಂತ ಭಿನ್ನವಾಗಿದೆ ಎಂದರು.
ಮಧ್ಯಪ್ರದೇಶದ ಸರಕಾರದಲ್ಲಿ ನಾನು ಗ್ರಾಮೀಣಾಭಿವೃದ್ಧಿ ಸಚಿವನಾ ಗಿ ದ್ದಾಗ ಅಂಬೇಡ್ಕರ್ ಅವರ ಜನ್ಮಸ್ಥಳ ವಾದ ಮಾಹೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭೂಮಿ ಪೂಜೆ ಮಾಡಿದ್ದರು. 10 ವರುಷ ಬೇರೆ ಸರಕಾರ ಇದ್ದಾಗ ನೆನೆಗುದಿಗೆ ಬಿದ್ದಿತ್ತು. ಬಿಜೆಪಿ ಸರಕಾರ ಬಂದ ಬಳಿಕ 14 ಕೋಟಿ ರೂ. ವೆಚ್ಚದಲ್ಲಿ ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಅಂಬೇಡ್ಕರ್ ಅವರನ್ನು ಎಲ್ಲರೂ ಅರಿಯಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಿ ದ್ದಾರೆ. ಅಂಬೇಡ್ಕರ್ ಅವರ ಜನ್ಮಭೂಮಿ, ಶಿûಾ ಭೂಮಿ, ಕರ್ಮ ಭೂಮಿ, ದೀûಾ ಭೂಮಿ, ಪರಿನಿರ್ವಾಣ ಭೂಮಿ ಹಾಗೂ ಚೈತ್ಯ ಭೂಮಿಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದ್ದು ಈ ಪ್ರದೇಶಗಳು ಈಗ ಅಂಬೇಡ್ಕರ್ ಅವರ ಸಮಗ್ರ ಪರಿಚಯ ನೀಡುತ್ತವೆ ಎಂದರು.
ಛತ್ತೀಸ್‌ಗಢದ ಮಹಾತ್ಮಾ ಗಾಂಧಿ ತೋಟಗಾರಿಕೆ ಮತ್ತು ಅರಣ್ಯ ವಿ.ವಿ.ಯ ಕುಲಪತಿ ಮತ್ತು ಮಾಹೊದ ಡಾ| ಬಿ.ಆರ್. ಅಂಬೇಡ್ಕರ್ ವಿ.ವಿ.ಯ ಸಂಸ್ಥಾಪಕ ಕುಲಪತಿ ಪ್ರೊ| ಆರ್.ಎಸ್. ಕುರೀಲ್ ಅವರು ಅಂಬೇಡ್ಕರರ ಜೀವನದ ಮಹತ್ತರ ಘಟ್ಟಗಳು, ಸಾಧನೆಗಳನ್ನು ವಿವರಿಸಿದರು.