ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರುತ್ತಿದ್ದದ್ದು ನೋಡಿದಾಗ ಮೈಸೂರು ಇಡೀ ರಾಜ್ಯದಲ್ಲಿ ನಂಬರ್ ಒನ್ ಆಗಿ ಬಿಡುತ್ತೋ ಎಂಬ ಆತಂಕ ಇತ್ತು. ಮೈಸೂರಲ್ಲಿ ಒಟ್ಟು 90 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅದರಲ್ಲಿ ಜ್ಯೂಬಿಲಿಯೆಂಟ್ ಕಾರ್ಖಾನೆಯ ಪಾತ್ರವೇ ಅತಿ ದೊಡ್ಡದಾಗಿತ್ತು. ರೋಗಿ ನಂಬರ್ 52 ಸೃಷ್ಟಿಸಿದ ಆತಂಕಕ್ಕೆ ಇಡೀ ಮೈಸೂರೇ ಆತಂಕಕ್ಕೀಡಾಗಿತ್ತು. ಈತನೊಬ್ಬನಿಂದಲೇ 75 ಜನರಿಗೆ ಕೊರೊನಾ ಬಂದಿತ್ತು. ಆದರೆ ಈಗ ಮೈಸೂರು ಮಹಾಮಾರಿ ಕೊರೊನಾವನ್ನ ಗೆದ್ದಿದೆ.
ಹೌದು. ಬರೋಬ್ಬರಿ 90 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದ ಮೈಸೂರಿನಲ್ಲಿ ಇದೀಗ 83 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಇಲ್ಲಿ 7 ಪ್ರಕರಣಗಳಷ್ಟೇ ಆ್ಯಕ್ಟಿವ್ ಆಗಿವೆ. ಬುಧವಾರ ಮತ್ತೊಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಲ್ಲಿ ಜ್ಯೂಬಿಲಿಯೆಂಟ್ ಚೈನ್ ಲಿಂಕ್, ತಬ್ಲಿಘಿ ಜಮ್ಹಾತ್ ನ ಚೈನ್ ಲಿಂಕ್ ತುಂಡಾಗಿದೆ. ಇದರಿಂದ ಸೋಂಕಿತರ ಡಿಸ್ವಾರ್ಜ್ ಕೂಡ ಹೆಚ್ಚಾಗಿದೆ.
ಈ ನಡುವೆ ಕೆ.ಆರ್ ನಗರ, ಎಚ್.ಡಿ ಕೋಟೆ ತಾಲೂಕಿನ ಭಾಗದಲ್ಲಿ ಸ್ವಲ್ಪ ಆತಂಕ ಎದುರಾಗಿದೆ. ಶುಂಠಿ ಖರೀದಿಗೆ ಬಂದಿದ್ದ ಕೇರಳದ ಮೂಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ಆತನ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟ 16 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಬೆಳೆಯೋದು ನಿಂತಿತೋ, ಯಾವಾಗ ಆ್ಯಕ್ಟಿವ್ ಪಾಸಿಟಿವ್ ಕೇಸ್ ಕಡಮೆಯಾದ್ವೋ ಆಗಲೇ ಜನ ಮೈಮರೆತಂತೆ ಕಾಣ್ತಿದೆ. ಮೈಸೂರು ಅಧಿಕೃತವಾಗಿ ರೆಡ್‍ಝೋನ್ ನಲ್ಲಿದ್ದರೂ ಜನ ಅನಗತ್ಯವಾಗಿ ಓಡಾಟ ಶುರು ಮಾಡಿರುವುದು ಕಂಡುಬಂದಿದೆ.