ಬೆಳಗಾವಿ: ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿಯೂ ನೇಣಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ನಡೆದಿದೆ.
ಗುರುನಾಥ್ ತಾವರೆ(45), ಹೆಂಡತಿ ಮೀನಾಕ್ಷಿ (35) ಜೋಡಿ ಇಬ್ಬರು ಮುದ್ದಾದ ಮಕ್ಕಳನ್ನ ಅನಾಥ ಮಾಡಿ ಹೋಗಿದ್ದಾರೆ. ಗುರುನಾಥ್ ಬೈಲಹೊಂಗಲ ತಾಲೂಕಿನ ಅಮಟೆ ಗ್ರಾಮದ ಪ್ರೌಢ ಶಾಲೆಯ ಶಿಕ್ಷಕರಾಗಿದ್ದು, ಹೀಗಾಗಿ ದಂಪತಿ ಬೈಲಹೊಂಗಲ ಪಟ್ಟಣಕ್ಕೆ ಬಂದು ನೆಲೆಸಿದ್ದಾರೆ. ಆಗಾಗ ಸಣ್ಣಪುಟ್ಟ ಜಗಳ ಬಿಟ್ಟರೆ ಬಡಿದಾಡಿಕೊಂಡ ಜೋಡಿ ಇವರದ್ದಲ್ಲ.
13 ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ 10 ವರ್ಷದ ಗಂಡು ಮಗ, 3 ವರ್ಷದ ಹೆಣ್ಣು ಮಗಳಿದ್ದಾಳೆ. ಹೀಗಿದ್ದ ಸಂಸಾರದಲ್ಲಿ ಹೇಳದೆ ಕೇಳದೆ ಶಿಕ್ಷಕ ಗುರುನಾಥ್ ರಸ್ತೆ ಪಕ್ಕದ ಜಮೀನೊಂದರಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಗಂಡ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಹೆಂಡತಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಂದರ ಸಂಸಾರದಲ್ಲಿ ಏಕಾಏಕಿ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳಲು ಆಗಾಗ ಹೆಂಡತಿ ಮೇಲೆ ಗಂಡ ಸಂಶಯ ಪಡುತ್ತಿದ್ದ. ಇದರಿಂದ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತಂತೆ. ಐದು ವರ್ಷದ ಹಿಂದೆ ಇದೇ ರೀತಿ ಜಗಳವಾಡಿಕೊಂಡು ಅದು ವಿಚ್ಛೇದನವರೆಗೂ ಬಂದುನಿಂತಿತ್ತು. ಆದರೆ ಹಿರಿಯರು ಜಗಳ ಬಗೆಹರಿಸಿ ಇಬ್ಬರನ್ನ ಒಂದಾಗಿಸಿದ್ದರು. ಹೀಗೆ ಒಂದಾದ ಬಳಿಕ ಮತ್ತೆ ಅನ್ಯೋನ್ಯವಾಗಿದ್ದ ಗಂಡ-ಹೆಂಡತಿ ಇದ್ದರು. ಹೀಗಿದ್ದ ಗಂಡ ಇಂದು ಬೈಲಹೊಂಗಲ ಹೊರ ವಲಯದ ಬೆಳಗಾವಿ ರಸ್ತೆಯ ಪಕ್ಕದ ಜಮೀನಿನಲ್ಲಿ ವಿಷ ಕುಡಿದರೆ, ಈ ವಿಷಯ ಕೇಳಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಅಪ್ಪ-ಅಮ್ಮನ ಕಳೆದುಕೊಂಡ ಎರಡು ಮಕ್ಕಳು ಅನಾಥರಾಗಿದ್ದಾರೆ.
ಒಟ್ಟಾರೆ ಒಂದು ಕಡೆ ಗಂಡ ನೊಂದು ಆತ್ಮಹತ್ಯೆಗೆ ಶರಣಾದರೆ, ಇತ್ತ ಹೆಂಡತಿ ಮಕ್ಕಳನ್ನ ನೆನಪಿಸಿಕೊಳ್ಳದೆ ಗಂಡನ ಜೊತೆಗೆ ಆಕೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ದುಡುಕಿನ ನಿರ್ಧಾರದಿಂದ ಇದೀಗ ಇಬ್ಬರು ಮಕ್ಕಳು ಬೀದಿಗೆ ಬಂದಿದ್ದಾರೆ.