ನವದೆಹಲಿ: ಮದ್ಯ ಮಾರಾಟದ ಮೇಲೆ ಹೇರಿದ್ದ ಶೇಕಡಾ 70 ಕೊರೊನಾ ವಿಶೇಷ ಶುಲ್ಕವನ್ನು ದೆಹಲಿ ಸರ್ಕಾರ ಹಿಂಪಡೆದುಕೊಂಡಿದ್ದು, ಬುಧವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.
ಕೊರೊನಾ ವಿಶೇಷ ಶುಲ್ಕ ಹಿಂಪಡೆದುಕೊಂಡಿರುವ ಸರ್ಕಾರ ಶೇ.20ರಿಂದ 25ರಷ್ಟು ವ್ಯಾಟ್ ಟ್ಯಾಕ್ಸ್ ಹೇರಲು ನಿರ್ಧಾರ ತೆಗೆದುಕೊಂಡಿದೆ. ದೆಹಲಿಯಲ್ಲಿ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಎರಡು ಮಹತ್ವ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಸರ್ಕಾರ ಮೂಲ ಬೆಲೆಯ ಮೇಲೆ ಶೇ.70 ನಷ್ಟು ಕೊರೊನಾ ವಿಶೇಷ ಶುಲ್ಕ ವಿಧಿಸಿ ಬೆಲೆ ಏರಿಕೆ ಮಾಡಿತ್ತು. ಲಾಕ್‍ಡೌನ್‍ನಿಂದ ಆರ್ಥಿಕ ನಷ್ಟದಲ್ಲಿ ಸರ್ಕಾರ ಆದಾಯ ಕ್ರೋಢೀಕರಿಸಲು ಹಾಗೂ ಮದ್ಯಕ್ಕಾಗಿ ಏರ್ಪಟ್ಟಿದ್ದ ದೊಡ್ಡ ಜನ ಸಮುದಾಯವನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು.
ಸೋಮವಾರದಿಂದ ದೆಹಲಿಯಲ್ಲಿ ಅನ್‍ಲಾಕ್ ಆಗಲಿದ್ದು, ಸಾರ್ವಜನಿಕ ಪ್ರದೇಶಗಳು, ಅಂಗಡಿ ಮುಂಗಟ್ಟು, ಮಾಲ್, ಮಾರುಕಟ್ಟೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಆರಂಭವಾಗಲಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಮೂವತ್ತು ಸಾವಿರದ ಗಡಿಯಲ್ಲಿದ್ದು ದೆಹಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಬೆಡ್‍ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಡಲಾಗಿದೆ.