ತಿರುವನಂತಪುರಂ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಆದರೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ವಾಲಂಚೇರಿ ಪಟ್ಟಣದ ನಿವಾಸಿ 14 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮೃತ ವಿದ್ಯಾರ್ಥಿನಿ ಕುಟುಂಬದವರು ಬಡವರಾಗಿದ್ದು, ಯಾವುದೇ ಟಿವಿ ಅಥವಾ ಸ್ಮಾರ್ಟ್ ಫೋನ್ ಅವರ ಬಳಿ ಇರಲಿಲ್ಲ. ಹೀಗಾಗಿ ನೊಂದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ಮಧ್ಯಾಹ್ನದಿಂದ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ಆದರೆ ಆಕೆಯ ಶವ ಮನೆಯ ಸಮೀಪವಿರುವ ಪ್ರತ್ಯೇಕ ಜಮೀನಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಮ್ಮ ಮನೆಯಲ್ಲಿ ಟೆಲಿವಿಷನ್ ಇದೆ. ಅದು ರಿಪೇರಿಗೆ ಬಂದಿದೆ. ಬೇಗ ರಿಪೇರಿ ಮಾಡಿಸುವಂತೆ ಮಗಳು ಹೇಳಿದ್ದಳು. ಆದರೆ ನಾನು ಟಿವಿ ರಿಪೇರಿ ಮಾಡಿಸಲು ಸಾಧ್ಯವಾಗಲಿಲ್ಲ. ನನಗೆ ಸ್ಮಾರ್ಟ್ ಫೋನ್ ಸಹ ಖರೀದಿ ಮಾಡಲು ಸಾಧ್ಯವಾಗಲಿಲ್ಲ” ಎಂದು ವಿದ್ಯಾರ್ಥಿನಿಯ ತಂದೆ ತಿಳಿಸಿದರು.
ಕುಟುಂಬವು ಆರ್ಥಿಕವಾಗಿ ತುಂಬಾ ತೊಂದರೆಗೀಡಾಗಿದೆ. ಆಕೆಯ ಬಳಿ ಯಾವುದೇ ಸ್ಮಾರ್ಟ್ ಫೋನ್ ಕೂಡ ಇರಲಿಲ್ಲ. ಇದರಿಂದ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕೆ ಆತಂಕಗೊಂಡಿದ್ದಳು. ಅಲ್ಲದೇ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಬೇಸರ ಮಾಡಿಕೊಂಡಿದ್ದಳು. ಸದ್ಯಕ್ಕೆ ಈ ಕುರಿತು ತನಿಖೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಎಸ್‍ಪಿ ಯು.ಅಬ್ದುಲ್ ಕರೀಮ್ ಹೇಳಿದರು.
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25 ರಿಂದ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಿವೆ. ಸದ್ಯಕ್ಕೆ ಮೇ 31 ರವರೆಗೆ ಸತತ ನಾಲ್ಕು ಹಂತದ ಲಾಕ್‍ಡೌನ್ ನಂತರ ದೇಶದಲ್ಲಿ ಲಾಕ್‍ಡೌನ್ ರಿಲೀಫ್ ಸಿಕ್ಕಿದೆ. ಆದರೆ ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಜುಲೈನಲ್ಲಿ ತೀರ್ಮಾನಿಸಲಾಗುತ್ತದೆ.