ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್ ಸಿಟಿ ರೌಂಡ್ಸ್ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್ ಶಿವು ಅವರಿಗೆ ಸನ್ಮಾನಿಸಿದ್ದಾರೆ.
ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, ಜೆಜೆನಗರ, ಪಾದರಾಯನಪುರ ಚಾಮರಾಜಪೇಟೆ, ಹೆಣ್ಣೂರು, ಬಾಣಸವಾಡಿ, ಕೋರಮಂಗಲ ಸೇರಿ ಹಲವು ಠಾಣೆಗೆ ಕಮಲ್‌ಪಂತ್ ಭೇಟಿ ನೀಡಿದ್ದರು. ಈ ವೇಳೆ ಸದಾಕಾಲ ಫೀಲ್ಡ್ನಲ್ಲಿ ಸಾರ್ವಜನಿಕರ ಜತೆ ಸೇವೆ ಮಾಡುವ ಪೊಲೀಸ್ ಕಾನ್ಸ್ ಟೇಬಲ್ಗಳಿಗೆ ಗೌರವ ಸಲ್ಲಬೇಕು ಎಂದು ಕೆ.ಜಿ.ಹಳ್ಳಿ ಏರಿಯಾದ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್ ಶಿವು ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೆ.ಜಿ.ಹಳ್ಳಿಯಲ್ಲಿ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್‌ಪಂತ್ ಕೆ.ಜಿ.ಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಪಿ ಹಾಗೂ ಎಸಿಪಿ ಅವರಿಂದ ಮಾಹಿತಿ ಪಡೆದಿದ್ದಾರೆ. ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ ಕಾನ್ಸ್‌ಟೇಬಲ್ ಶಿವು ಹೆಸರನ್ನು ಸೂಚಿಸಿದ್ದಾರೆ. ಈ ವೇಳೆ ನೈಟ್ ಬೀಟ್ನಲ್ಲಿದ್ದ ಕಾನ್ಸ್‌ಟೇಬಲ್ ಶಿವು ಅವರನ್ನು ಕೆ.ಜಿ.ಹಳ್ಳಿ ಠಾಣೆಗೆ ಕರೆಸಿದ್ದು, ಕಮಿಷನರ್ ಕಮಲ್‌ಪಂತ್ ಸಾರ್ವಜನಿಕರ ಮುಂದೆ ಕಾನ್ಸ್‌ಟೇಬಲ್ ಶಿವುಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡಿದ್ದಾರೆ.
Laxmi News 24×7