ಬೆಂಗಳೂರು : ದೇಶಾದ್ಯಂತ ಸತತ ಎರಡನೇ ವರ್ಷ ಕೊರೊನಾ ಕಾಡುತ್ತಿದ್ದು, ಇದು ಪ್ರಾಥಮಿಕ ಶಿಕ್ಷಣದ ಮೇಲೆಯೂ ಅಡ್ಡ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಶಾಲಾ ದಾಖಲಾತಿ ಆರಂಭವಾಗಿ ಆಗಲೇ 20 ದಿನ ಕಳೆದರೂ ಇದುವರೆಗೆ ಶೇ. 20ರಷ್ಟೂ ದಾಖಲಾತಿ ಆಗಿಲ್ಲ. ಅಷ್ಟೇ ಅಲ್ಲ, ಸರಕಾರಿ, ಖಾಸಗಿ, ಅನುದಾನಿತ ಶಾಲೆಗಳನ್ನು ಒಟ್ಟಾಗಿ ಸೇರಿಸಿದರೂ ಶೇ. 50ರ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಜು. 5ರ ವರೆಗೆ ರಾಜ್ಯಾದ್ಯಂತ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಾಖಲಾತಿಗೆ ಸಂಬಂಧಿಸಿ ಸಂಪೂರ್ಣ ಅಂಕಿಅಂಶಗಳ ವರದಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮಾಹಿತಿ ಆಧಾರದಲ್ಲಿ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಅದರಂತೆ 1ನೇ ತರಗತಿಗೆ 10,21,105 ವಿದ್ಯಾರ್ಥಿಗಳನ್ನು ದಾಖಲಿಸುವ ಗುರಿ ಇದ್ದರೂ ಈವರೆಗೆ 1,79,434 (ಶೇ. 17.57) ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟಾರೆಯಾಗಿ ಒಂದನೇ ತರಗತಿಗೆ ದಾಖಲಾತಿ ಶೇ. 20ನ್ನು ದಾಟಿಲ್ಲ ಮತ್ತು ಸರಕಾರಿ ಶಾಲೆಗಳಲ್ಲಿ ಶೇ. 30ರಷ್ಟು ದಾಖಲಾತಿ ಆಗಿಲ್ಲ.
ಯಾವ ಶಾಲೆ, ಎಷ್ಟು ದಾಖಲಾತಿ?
ಜೂನ್ 24ರಿಂದ ಜುಲೈ 5ರ ಅವಧಿಯಲ್ಲಿ ರಾಜ್ಯದ ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಿಗೆ ಶೇ. 50.4ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ. 66.9, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ. 64.9 ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ. 30.9ರಷ್ಟು ಪ್ರವೇಶಾತಿ ಆಗಿದೆ.
ಕೆಲವೆಡೆ ದಾಖಲಾತಿ ಕಡಿಮೆ
ಮೈಸೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಜೂ. 25ರ ವರೆಗೂ ಲಾಕ್‌ಡೌನ್ ಇದ್ದುದರಿಂದ ದಾಖಲಾತಿ ಕಡಿಮೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನುº ಕುಮಾರ್ ಹೇಳಿದ್ದಾರೆ. ಒಂದನೇ ತರಗತಿಗೆ ಹೊಸ ದಾಖಲಾತಿ ಇರುವುದರಿಂದ ಅದೇ ಅತೀ ಮುಖ್ಯವಾಗುತ್ತದೆ. 10 ಲಕ್ಷ ದಾಖಲಾತಿ ಗುರಿ ಇದ್ದು, ಈಗಾಗಲೇ 1.79 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಉಳಿದ ತರಗತಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ವಿವರ ಇರುತ್ತದೆ, ಅದರಂತೆ ಮುಂದಿನ ತರಗತಿ ಪ್ರವೇಶಾತಿ ನಡೆಯುತ್ತದೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿರುವ ಬಗ್ಗೆ ಇನ್ನಷ್ಟೇ ಸ್ಪಷ್ಟ ಅಂಕಿಅಂಶ ಬರಬೇಕಿದೆ ಎಂದಿದ್ದಾರೆ.
ಕಡಿಮೆ ದಾಖಲಾತಿಗೆ ಕಾರಣ
– ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಹೆತ್ತವರ ಅಂಜಿಕೆ.
– ಖಾಸಗಿ ಶಾಲೆಗೆ ಶುಲ್ಕ ಪಾವತಿಸಲಾಗದೆ ಬೇರೆ ಶಾಲೆಗೆ ವರ್ಗಾಯಿಸಲು ವರ್ಗಾವಣೆ ಪತ್ರ ಸಿಗದಿರುವುದು.
– ಲಾಕ್‌ಡೌನ್‌ನಿಂದ ಕೆಲವೆಡೆ ದಾಖಲಾತಿ ಆಗಿಲ್ಲ.
– ಶಾಲೆಯಲ್ಲಿ ದಾಖಲಾತಿ ಆಗಿದ್ದರೂ ಎಸ್‌ಎಟಿಎಸ್‌ಗೆ ಅಪ್‌ಡೇಟ್ ಆಗಿಲ್ಲ.
– ಭೌತಿಕ ತರಗತಿ ಆರಂಭಕ್ಕಾಗಿ ಕಾಯುತ್ತಿರುವುದು.
* ಕಿರಿಯ ಪ್ರಾಥಮಿಕ ತರಗತಿಗೆ ಆನ್‌ಲೈನ್ ಸೂಕ್ತವಲ್ಲ ಎಂಬ ಹೆತ್ತವರ ಮನೋಭಾವ.
– ಕೊರೊನಾದಿಂದ ಉದ್ಯೋಗ ಮತ್ತಿತರ ಕಾರಣಕ್ಕಾಗಿ ನಗರ ಪ್ರದೇಶದಿಂದ ಕುಟುಂಬಗಳ ವಲಸೆ.
ಸರಕಾರಿ ಶಾಲೆಗಳಲ್ಲಿ ಒತ್ತಾಯ ಪೂರ್ವಕವಾಗಿ ದಾಖಲಾತಿ ಮಾಡು ತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಶಿಕ್ಷಣ ಇಲಾಖೆ ನೀಡುತ್ತಿರುವ ಅಂಕಿಅಂಶ ಸತ್ಯಕ್ಕೆ ದೂರವಾದುದು.
-ಡಿ. ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ
ಜಿಲ್ಲಾವಾರು ವಿವರ
ಜಿಲ್ಲಾವಾರು ದಾಖಲಾತಿಯಲ್ಲಿ ಚಾಮರಾಜನಗರ (ಶೇ. 76), ಹಾವೇರಿ (ಶೇ. 75) ಮತ್ತು ಧಾರವಾಡ ( ಶೇ.69) ಮೊದಲ ಮೂರು ಸ್ಥಾನಗಳಲ್ಲಿವೆ. ಬಳ್ಳಾರಿಯಲ್ಲಿ ಶೇ.69, ದಕ್ಷಿಣ ಕನ್ನಡದಲ್ಲಿ ಶೇ. 68, ಯಾದಗಿರಿಯಲ್ಲಿ ಶೇ. 67, ಬಾಗಲಕೋಟೆ ಮತ್ತು ಉಡುಪಿಯಲ್ಲಿ ತಲಾ ಶೇ. 54ರಷ್ಟು ದಾಖಲಾತಿ ಆಗಿದೆ.
ಮೈಸೂರು (ಶೇ.37), ಬೆಂಗಳೂರು ಉತ್ತರ (ಶೇ.22) ಮತ್ತು ಬೆಂಗಳೂರು ದಕ್ಷಿಣ (ಶೇ.13) ಕ್ರಮವಾಗಿ ಕೊನೆಯ ಮೂರು ಸ್ಥಾನಗಳಲ್ಲಿವೆ. ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ದಾಖಲಾತಿಯಲ್ಲೂ ಚಾಮರಾಜನಗರ, ಹಾವೇರಿ ಮತ್ತು ಧಾರವಾಡ ಮುಂದಿವೆ.