ಬೆಂಗಳೂರು, ಏಪ್ರಿಲ್ 11; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ನಡುವೆಯೇ ಆರೋಗ್ಯ ಇಲಾಖೆ ಸಿಬ್ಭಂದಿಗಳ ನಿರ್ಲಕ್ಷ್ಯವೂ ಬೆಳಕಿಗೆ ಬಂದಿದೆ.
ಕೋಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗರಾಜ್ ಮತ್ತು ಹಿರೇಮಠ ಸರ್ಕಾರಕ್ಕೆ ಲೆಕ್ಕ ತೋರಿಸಲು ನಕಲಿ ಕೋವಿಡ್ ಟೆಸ್ಟ್ ಮಾಡುತ್ತಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಾಗರಾಜ್ ಮತ್ತು ಹಿರೇಮಠ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಕೋವಿಡ್ ಪರೀಕ್ಷೆ ಮಾಡದೆಯೇ ಸರ್ಕಾರಕ್ಕೆ ಲೆಕ್ಕ ತೋರಿಸಲು ಇವರು ಕೆಲಸ ಮಾಡುತ್ತಿದ್ದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ನಗರದಲ್ಲಿ 4,384 ಹೊಸ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 44,863ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಕೋವಿಡ್ ಸೋಂಕಿತರಿಗಾಗಿ ವಾರ್ಡ್ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪನೆ ಮಾಡುತ್ತಿದೆ.
ಪರಿಸ್ಥಿತಿಯ ಗಂಭೀರತೆ ಅರಿಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಕಲಿ ಕೋವಿಡ್ ಟೆಸ್ಟ್ ಮಾಡಿ, ಸರ್ಕಾರಕ್ಕೆ ಲೆಕ್ಕ ತೋರಿಸಲು ಹೊರಟಿದ್ದರು. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
Laxmi News 24×7