Breaking News

ಸಿಡಿ ಪ್ರಕರಣದಲ್ಲಿ FIR ದಾಖಲಾಗಲಿದೆ : ಗೃಹ ಸಚಿವ ಬೊಮ್ಮಾಯಿ

Spread the love

ಬೆಂಗಳೂರು, ಫೆ.11- ಪ್ರಾಥಮಿಕ ತನಿಖೆ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿಯು ಪ್ರಾಥಮಿಕ ತನಿಖೆ ಆರಂಭವಾದ ಬಳಿಕ ಎಫ್‍ಐಆರ್ ದಾಖಲಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಯಾರ ಮೇಲೂ ಯಾವ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾರಕಿಹೊಳಿ ಕುಟುಂಬದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಡಿ ಪ್ರಕರಣದ ವಿಚಾರವಾಗಿ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಷಡ್ಯಂತ್ರ ನಡೆಸಿ ಕೆಲವರು ಪಿತೂರಿ ನಡೆಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ಎಲ್ಲವನ್ನೂ ಸರ್ಕಾರ ಪರಿಶೀಲಿಸಿ ಎಸ್‍ಐಟಿಗೆ ವಹಿಸಿದೆ ಎಂದು ತಿಳಿಸಿದರು.

ಮೇಲ್ನೋಟಕ್ಕೆ ಸಿಡಿ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಎಸ್‍ಐಟಿಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾವು ಇಂತಿಷ್ಟೇ ದಿನದಲ್ಲಿ ವರದಿ ನೀಡಬೇಕೆಂದು ಎಸ್‍ಐಟಿಗೆ ಸೂಚನೆ ಕೊಟ್ಟಿಲ್ಲ. ಅವರು ಮುಕ್ತವಾಗಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ನಿಗದಿತ ಸಮಯದೊಳಗೆ ನೀಡಬೇಕೆಂದು ಎಲ್ಲಿಯೂ ಸೂಚಿಸಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಎಸ್‍ಐಟಿ ಮುಖ್ಯಸ್ಥರಿಗೆ ನಾನೇ ಸೂಚನೆ ಕೊಟ್ಟಿದ್ದೇನೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ನಾವು ಇಂತಹ ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ಅಥವಾ ಇನ್ನಾರನ್ನೋ ರಕ್ಷಣೆ ಮಾಡಬೇಕೆಂಬ ಕಾರಣಕ್ಕಾಗಿ ತನಿಖೆಗೆ ಆದೇಶ ಮಾಡಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಸಿಡಿಯನ್ನು ಯಾರು ಮಾಡಿದರು, ಇದರ ಹಿಂದಿನ ಉದ್ದೇಶವಾದರೂ ಏನು, ಯಾವ ಕಾರಣಕ್ಕಾಗಿ ಇದು ಬಹಿರಂಗಗೊಂಡಿತು ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳೂ ಹೊರಬರಬೇಕು. ಅದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.

ಕಬ್ಬನ್‍ಪಾರ್ಕ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಮತ್ತೊಂದು ಕಡೆ ಮೊದಲು ದೂರು ನೀಡಿದವರು ನಂತರ ದೂರು ಹಿಂಪಡೆದಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿದ್ದೇವೆ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ. ಅಲ್ಲಿಯವರೆಗೂ ನಾವು ಯಾವುದೇ ಗಾಳಿ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾವೇನು ಬಿಜೆಪಿಯವರ ಪ್ಯಾಂಟು, ಶರ್ಟ್ ಬಿಚ್ಚಲು ಹೇಳಿದ್ದೆವಾ ಎಂಬ ಆರೋಪ ಕುರಿತಾಗಿ ನಮ್ಮನ್ನು ಆ ಮಟ್ಟಕ್ಕೆ ಇಳಿಸಬೇಡಿ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

Dailyhunt

Spread the love

About Laxminews 24x7

Check Also

ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Spread the love ವಿಜಯಪುರ :ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ* ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ