ಬೆಂಗಳೂರು, ಜು.21- ಸಕಾಲಕ್ಕೆ ಸರಿಯಾಗಿ ಕಡತಗಳನ್ನು ವಿಲೇವಾರಿ ಮಾಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಕಾರಣ, ಮುಖ್ಯಮಂತ್ರಿಗಳ ಅಕೃತ ಕಚೇರಿ ಕೃಷ್ಣಾದಲ್ಲೇ ಪ್ರಮುಖ ಇಲಾಖೆಗಳ ಸಾವಿರಾರು ಕಡತಗಳು ಎರಡರಿಂದ ಮೂರು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿವೆ.
ಪ್ರಮುಖವಾಗಿ ಆರ್ಥಿಕ, ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿಘಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬೃಹತ್ ಕೈಗಾರಿಕೆ, ಸಹಕಾರ, ಸಮಾಜ ಕಲ್ಯಾಣ, ಕೃಷಿ, ಕಾರ್ಮಿಕ ಸೇರಿದಂತೆ ಪ್ರಮುಖ ಇಲಾಖೆಗಳ ಕಡತಗಳು ವಿಲೇವಾರಿಯಾಗಿಲ್ಲಘಿ.
ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳದೆ ಒಂದು ವಾರದೊಳಗೆ ವಿಲೇವಾರಿ ಮಾಡಬೇಕೆಂದು ಖುದ್ದು ಅಕಾರಿಗಳಿಗೆ ಸಿಎಂ ಬಿಎಸ್‍ವೈ ಅವರು ಸೂಚನೆ ಕೊಟ್ಟಿದ್ದರು.
ಆದರೆ, ಅಕಾರಿಗಳು ನಾನಾ ಕಾರಣಗಳನ್ನು ನೀಡಿ ಕಡತಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಉಳಿಸಿಕೊಂಡಿರುವುದಕ್ಕೆ ಅಕಾರಿ ವಲಯದಲ್ಲೇ ಸಂಶಯಗಳು ವ್ಯಕ್ತವಾಗಿವೆ.
ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬಂದು ಇನ್ನು ಐದು ದಿನ ಮುಗಿದರೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಪ್ರಾರಂಭದಲ್ಲಿ ಯಡಿಯೂರಪ್ಪನವರು ಅಕಾರಿ ವರ್ಗಕ್ಕೆ ಚಾಟಿ ಬೀಸಿ ಯಾವುದೇ ಕಾರಣಕ್ಕೂ ಕಡತ ವಿಳಂಬವಾಗುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಪ್ರಾರಂಭದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ನಿರ್ವ ಹಣೆ ಹಾಗೂ ಇದೀಗ ಕೋವಿಡ್-19 ಎದುರಾಗಿರುವುದರಿಂದ ಅಕಾರಿ ವರ್ಗ ಇದರ ಕಡೆ ಹೆಚ್ಚು ಗಮನ ನೀಡಿತು.
ಕಡತಗಳ ವಿಲೇವಾರಿಗಾಗಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಹಿರಿಯ ಐಎಎಸ್ ಅಕಾರಿಗಳ ನೇತೃತ್ವದಲ್ಲಿ ಕಡತ ವಿಲೇವಾರಿಗಾಗಿ ನೇಮಕ ಮಾಡಿಕೊಂಡಿದ್ದಾರೆ.
ಕೃಷ್ಣಾದಲ್ಲಿ ಕಡತಗಳ ವಿಲೇವಾರಿಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ. ನಿಯಮಗಳ ಪ್ರಕಾರ, ಎರಡು ದಿನಗಳಲ್ಲಿ ಕಡತ, ಸಾರ್ವಜನಿಕರ ಕುಂದು-ಕೊರತೆ ಮತ್ತು ಪತ್ರಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕೆಂಬುದು ಇದರ ಉದ್ದೇಶ.
ಆದರೆ, ಕಳೆದ ಮೂರು ತಿಂಗಳಿನಿಂದ ಪ್ರಮುಖ ಇಲಾಖೆಗಳ ಕಡತಗಳು ಹಾಗೆಯೇ ಬಾಕಿ ಉಳಿದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.ಕೆಲವು ಕಡತಗಳು ಕೇವಲ ಎರಡು ದಿನಗಳಲ್ಲಿ ವಿಲೇವಾರಿಯಾದರೆ ಇನ್ನೂ ಕೆಲವು ಕಡತಗಳನ್ನು ಉದ್ದೇಶಪೂರ್ವಕವಾಗಿ ಅಕಾರಿ ವರ್ಗ ವಿಳಂಬ ಮಾಡುತ್ತದೆ ಎಂಬ ಗುಸುಗುಸು ಕೃಷ್ಣಾದಲ್ಲಿ ಹಬ್ಬಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಅವರ ನೇತೃತ್ವದಲ್ಲಿ ಕಡತಗಳ ವಿಲೇವಾರಿಗಾಗಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಕಾರಿಗಳ ವರ್ಗಾವಣೆ, ಮುಂಬಡ್ತಿಘಿ, ಕ್ಷೇತ್ರಗಳಿಗೆ ಅನುದಾನ ಬಿಡುಗಡೆ, ಕಾಮಗಾರಿಗಳ ಅನುಷ್ಠಾನಕ್ಕೆ ಅನುಮತಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಗೆ ಪ್ರಮುಖ ಕಡತಗಳೇ ರವಾನೆಯಾಗುತ್ತವೆ.
ಕಡತ ವಿಲೇವಾರಿ ವಿಳಂಬ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಆಕ್ಷೇಪಿಸಿದ್ದರು. ಸಚಿವ ಸಂಪುಟದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿ ಸಚಿವರು ವಾರದಲ್ಲಿ ಎರಡು ದಿನ ವಿಧಾನಸೌಧದಲ್ಲಿ ಕುಳಿತು ಕಡತ ವಿಲೇವಾರಿ ಮಾಡಬೇಕು ಎಂದು ಸಿಎಂ ಸೂಚಿಸಿದ್ದರು.
ಅಲ್ಲದೆ, ಬಾಕಿ ಕಡತ ವಿಲೇವಾರಿ ಆಗುವವರೆಗೆ `ಭಾನುವಾರವೂ ಕಾರ್ಯನಿರ್ವಹಿಸುವಂತೆ ಅಕಾರಿಗಳಿಗೆ ತಾಕೀತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಬಿಜೆಪಿ ಸರ್ಕಾರ ಅಕಾರಕ್ಕೆ ಬಂದ ದಿನದಿಂದಲೂ ಕಡತ ವಿಲೇವಾರಿ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು.
ಶಿಕ್ಷಣ ಹಾಗೂ ಕಂದಾಯ ಇಲಾಖೆ ಸೇರಿ ಕೆಲವು ಇಲಾಖೆಗಳ ಕಾರ್ಯ ವಿಳಂಬ ಕುರಿತಂತೆ ಸ್ವತಃ ಮುಖ್ಯಮಂತ್ರಿ ಅಸಮಾಧಾನ ಹೊರಹಾಕಿದ್ದರು. ವಿಧಾನಸಭೆ ಹಾಗೂ ಪರಿಷತ್‍ನಲ್ಲಿ ಆಡಳಿತ ಪಕ್ಷದ ಸದಸ್ಯರೇ ಪರೋಕ್ಷವಾಗಿ ಕಿಡಿಕಾರಿದ್ದರು. ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು.
# ಯಾವಾಗಲೂ ಸರ್ವರ್ ಡೌನ್:
ರಾಜ್ಯದಲ್ಲಿ ಇ-ಆಡಳಿತ ಜಾರಿಗೊಳಿಸಿಯೂ ದಶಕ ಉರುಳಿದೆ. ಈ ನಡುವೆಯೂ ಆನ್‍ಲೈನ್ ಮೂಲಕ ಕಡತ ವಿಲೇವಾರಿ ಮಾಡುವುದರಲಿ ಸುಧಾರಣೆ ಕಂಡಿಲ್ಲ . ಸಚಿವಾಲಯದಲ್ಲಿ ಯಾವಾಗ ನೋಡಿದರೂ ಸರ್ವರ್ ಡೌನ್ ಎಂದು ದೂರು ಹೇಳಿಕೊಳ್ಳುವುದು ಸಾಮಾನ್ಯವಾಗಿದೆ.
ಇ-ಗವರ್ನೆನ್ಸ್‍ನಲ್ಲಿ ದೇಶದಲ್ಲಿ ಮಾದರಿ ಎಂದು ಹೇಳಿಕೊಳ್ಳುವ ರಾಜ್ಯದಲ್ಲಿ ಆನ್‍ಲೈನ್ ವಿಧಾನದ ಕಡತ ವಿಲೇವಾರಿಗೂ ತಂತ್ರಜ್ಞಾನದ ಪೂರ್ಣ ಸಹಕಾರ ಇಲ್ಲದಂತಾಗಿದೆ. ನಾನಾ ಇಲಾಖೆಗಳ ಕಡತ ತ್ವರಿತಗತಿಯಲ್ಲಿ ವಿಲೇ ಆಗುತ್ತಿದ್ದರೆ ಆಡಳಿತ ಯಂತ್ರ ಚುರುಕಾಗಿದೆ ಎಂದರ್ಥ.
ಕಡತಗಳು ಕದಲದೆ ಧೂಳ್ ತಿನ್ನುತ್ತಿದ್ದರೆ ಆಡಳಿತ ಯಂತ್ರ ನಿಷ್ಕ್ರೀಯಗೊಂಡಿದೆ ಎಂದೇ ಅರ್ಥ. ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮೇಲೆ ತನ್ನ ಕಾರ್ಯಧಕ್ಷತೆ ರುಜುವಾತುಪಡಿಸುವ ಮಹತ್ತರ ಸವಾಲು ಇದೆ.
ಇಂಥ ಕ್ಲಿಷ್ಟಕರ ಸಂಧರ್ಭದಲ್ಲಿ ಆಡಳಿತ ಯಂತ್ರಕ್ಕೆ ಹೊಸ ಸ್ಪರ್ಶ ನೀಡಬೇಕಿತ್ತು. ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಚಾಟಿ ಬೀಸಬೇಕಿತ್ತು. ಮುಖ್ಯಮಂತ್ರಿಯವರು ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಡಿಸಿ, ಸಿಇಒಗಳ ಸಭೆಯನ್ನೇನೋ ನಡೆಸಿದ್ದಾರೆ. ಈ ನಡುವೆಯೂ ಕಡತ ವಿಲೇವಾರಿಯಲ್ಲೇ ತೀವ್ರ ಹಿನ್ನಡೆಯಾಗಿದೆ. ಹಾಗಾಗಿ ಈ ಸರ್ಕಾರ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೇಗೆ ಕ್ಷಿಪ್ರಗತಿ ನೀಡುತ್ತದೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಉದ್ದೇಶಪೂರ್ವಕ ವಿಳಂಬ: ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರದ ವಾಸನೆಯೂ ಇದೆ. ಇದೇ ಕಾರಣದಿಂದ ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯದಲ್ಲಿ ಹಾಗೆಯೇ ಇಟ್ಟುಕೊಳ್ಳಲಾಗುತ್ತಿದೆ. ಕಡತಗಳು ಕದಲದಂತೆ ಮಾಡುವುದೇ ಒಂದು ವ್ಯವಸ್ಥಿತ ತಂತ್ರವಾಗಿದೆ ಎಂಬ ಆರೋಪವೂ ಇದೆ.
ಹಣ ಕೊಟ್ಟವರ ಕಡತಗಳು ರಾತ್ರೋರಾತ್ರಿ ವಿಲೇವಾರಿಯಾಗುತ್ತವೆ. ಕೈ ಬೆಚ್ಚಗೆ ಮಾಡದಿದ್ದರೆ ತಿಂಗಳುಗಟ್ಟಲೆ ಅಲ್ಲಿಯೇ ಕೊಳೆಯುತ್ತವೆ ಎಂಬ ಆರೋಪ ಸರ್ವೆ ಸಾಮಾನ್ಯವಾಗಿದೆ.