ಕೋಲ್ಕತ್ತಾ: ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ಮರ್ಡರ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಚೋಪ್ರಾ ಗ್ರಾಮದವರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.
ಈಗ ತಾನೇ ಹತ್ತನೇ ತರಗತಿ ಪಾಸ್ ಆಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮತ್ತು ಗ್ರಾಮಸ್ಥರು ಸೇರಿಕೊಂಡು ಕೋಲ್ಕತಾ ಮತ್ತು ಸಿಲಿಗುರಿ ನಡುವಿನ ನ್ಯಾಷನಲ್ ಹೈವೇ 32ನ್ನು ಬ್ಲಾಕ್ ಮಾಡಿದ್ದಾರೆ. ಜೊತೆಗೆ ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಪ್ರತಿಭಟನಾಕರರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಮೃತಪಟ್ಟ ಬಾಲಕಿಯ ಸಹೋದರಿ ಮಾತನಾಡಿ, ಆಕೆ ಈಗ ತಾನೇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಳು. ಆದರೆ ಕಳೆದ ರಾತ್ರಿ ಆಕೆ ಕಾಣೆಯಾಗಿದ್ದಳು ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಹುಡುಕಾಡಿದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿಲ್ಲ. ಆದರೆ ಆಕೆಯ ಮೃತದೇಹ ಊರಹೊರಗಿನ ಮರದ ಕೆಳಗೆ ದೊರಕಿತ್ತು. ಘಟನಾ ಸ್ಥಳದಲ್ಲಿ ಎರಡು ಬೈಕ್ ಮತ್ತು ಮೊಬೈಲ್ ಫೋನ್ ಸಿಕ್ಕ ಕಾರಣ ಸ್ಥಳೀಯರು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳದ ಪೊಲೀಸರು, ನಾವು ಸ್ಥಳಕ್ಕೆ ಹೋಗಿ ಮೃತ ಬಾಲಕಿಯ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೆವು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಹುಡುಗಿಯ ದೇಹದಲ್ಲಿ ವಿಷ ಇರುವುದು ಪತ್ತೆಯಾಗಿದೆ. ಜೊತೆಗೆ ಆಕೆ ಮೃತದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಆದ್ದರಿಂದ ಈಕೆಯ ಮೇಲೆ ಅತ್ಯಾಚಾರ ಆಗಿರುವುದಿಲ್ಲ. ಆದರೆ ಗ್ರಾಮಸ್ಥರು ಅನುಮಾನಗೊಂಡು ಈ ರೀತಿ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.