ಬೆಂಗಳೂರು, ಫೆ.12- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ, ತರಕಾರಿ ಬೆಲೆಗಳ ನಿರಂತರ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಕೊರೊನಾ ಸೋಂಕಿನಿಂದ ಆರ್ಥಿಕವಾಗಿ ಕಂಗೆಟ್ಟು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಕೆಲವು ವಾರಗಳಿಂದ ಬೇಳೆಕಾಳು, ಆಹಾರ ಪದಾರ್ಥ, ಹಣ್ಣು-ತರಕಾರಿಗಳ ಬೆಲೆ ಗಗನ ಮುಖಿಯಾಗಿದ್ದು, ಜನ ತತ್ತರಗೊಂಡಿದ್ದಾರೆ.
ಕೆಳ ಹಾಗೂ ಮಧ್ಯಮ ವರ್ಗದ ಜನರ ಬದುಕಂತೂ ಹೇಳತೀರದಾಗಿದೆ. ಬೆಲೆ ಏರಿಕೆಗಳ ಹುಚ್ಚಾಟದಿಂದ ಪ್ರತಿದಿನ ಬಡವರ ಪರದಾಟ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ದರ ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಏರಿಕೆಯಾಗಿ ಜನಸಾಮಾನ್ಯರ ಬದುಕಿಗೆ ಪೆಟ್ಟು ಬಿದ್ದಿದೆ. ಸಾಗಾಟದ ವೆಚ್ಚದಲ್ಲೂ ಕೂಡ ಹೆಚ್ಚಳವಾಗಿದ್ದು, ಗ್ರಾಮೀಣ ಪ್ರದೇಶದ ಜನರ ಬದುಕಿನ ಮೇಲೂ ಪರಿಣಾಮ ಬೀರಿದೆ.
ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೇಳೆ ಕಾಳುಗಳು, ಅಕ್ಕಿ, ತರಕಾರಿ ಎಲ್ಲವೂ ತುಟ್ಟಿಯಾದರೆ ಬದುಕುವುದು ಹೇಗೆ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವೇತನವೂ ಕಡಿಮೆ ಯಾಗಿದೆ. ಜೀವನ ನಿರ್ವಹಣೆಗಾಗಿ ಈ ಹಿಂದೆ ಮಾಡಿದ ಸಾಲ ತೀರಿಸಲಾಗದೆ ಜನ ಹೈರಾಣಾಗಿದ್ದಾರೆ. ಕೆಲಸ ಕಳೆದುಕೊಂಡವರು ಕೆಲಸ ಹುಡುಕಿಕೊಳ್ಳಲು ಪರದಾಡುವ ಪರಿಸ್ಥಿತಿಯಲ್ಲಿರುವಾಗಲೇ ಈಗ ಬೆಲೆ ಏರಿಕೆಯ ಬಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಂಕಷ್ಟದ ಸಮಯದಲ್ಲಿ ನೆರವಿಗೆ ಬರಬೇಕಾಗಿದ್ದ ಸರ್ಕಾರಗಳು ಪ್ರತಿದಿನ ದಿನಸಿ ಪದಾರ್ಥಗಳ ಬೆಲೆ ಏರಿಸುತ್ತಾ ಹೋದರೆ ಏನು ಮಾಡಬೇಕೆಂದು ತೋಚದಂತಾದ ಸಾರ್ವ ಜನಿಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ವರ್ತಕರು ಬೇಕಾಬಿಟ್ಟಿ ಬೆಲೆ ಏರಿಸಿದ್ದರು. ಈಗ ಕೊರೊನಾ ಕ್ಷೀಣಿಸಿದ್ದು, ಬೆಲೆ ಇಳಿಕೆಯಾಗುತ್ತದೆ ಎಂದು ಜನಸಾಮಾನ್ಯರು ನಂಬಿದ್ದರು. ಆದರೆ, ದಿನನಿತ್ಯ ಬೆಲೆ ಏರುಮುಖ ವಾಗುತ್ತಲೇ ಸಾಗಿದೆ.
ಖಾದ್ಯ ತೈಲದ ಬೆಲೆ ಹೆಚ್ಚಾಗಿದೆ. ಸರಕು-ಸಾಗಣೆ ದರ ಹೆಚ್ಚಳದ ನೆಪದಲ್ಲಿ 100ರೂ. ಇದ್ದ ಅಡುಗೆ ಎಣ್ಣೆ ಬೆಲೆ 170ರೂ. ವರೆಗೂ ಹೋಗಿದೆ. ಅಕ್ಕಿ 40 ರಿಂದ 45 ರೂ. ಇದ್ದದ್ದು ಈಗ 55 ರಿಂದ 60ರೂ. ಆಗಿದೆ. ತರಕಾರಿ ಬೆಲೆ ಕೂಡ ಗಗನಮುಖಿಯಾಗಿದೆ. ಈರುಳ್ಳಿ ಬೆಲೆ ಇಳಿಯುತ್ತಲೇ ಇಲ್ಲ. ಟೊಮ್ಯಾಟೋ 20 ರಿಂದ 30ರೂ.,
ಈರುಳ್ಳಿ 30 ರಿಂದ 50, ಬೆಳ್ಳುಳ್ಳಿ 100 ರಿಂದ 120, ಆಲೂಗಡ್ಡೆ 35 ರಿಂದ 40ರೂ., ತೊಗರಿ ಬೇಳೆ 120 ರಿಂದ 120 ರೂ., ಉದ್ದಿನ ಬೇಳೆ 125ರೂ., ಹೆಸರು ಬೇಳೆ 100ರೂ., ಕಡ್ಲೆಬೇಳೆ 100ರೂ., ಹೆಸರುಕಾಳು 115ರೂ., ಕಡ್ಲೆಕಾಳು 60ರೂ., ಹಲಸಂದಿ 60ರೂ., ಬಟಾಣಿ 150ರೂ. ಹೀಗೆ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಒಂದೆಡೆಯಾದರೆ ವಿದ್ಯುತ್ ಬಿಲ್, ನೀರಿನ ಬಿಲ್ ಕೂಡ ಸರ್ಕಾರ ಏರಿಸಿದೆ.
ಕಳೆದ ಜೂನ್‍ನಿಂದ ಪೆಟ್ರೋಲ್, ಡೀಸೆಲ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಯಾಗಿದ್ದು, ಮುಂದುವರಿಯುತ್ತಲೇ ಇದೆ. ಜನವರಿ, ಫೆಬ್ರವರಿಯಾದರೂ ಇಳಿಕೆ ಯಾಗಿಲ್ಲ. ಯಾವ ಪದಾರ್ಥಗಳ ಬೆಲೆಯೂ ಕಡಿಮೆಯಾಗಿಲ್ಲ. ಗ್ರಾಹಕರು ಮಾತ್ರ ಹೆಚ್ಚಿನ ದರ ಕೊಟ್ಟು ಕೊಳ್ಳಬೇಕು. ಆದರೆ, ಬೆಳೆದ ರೈತರಿಗೆ ಉತ್ತಮ ಬೆಲೆ ಮಾತ್ರ ಸಿಗುತ್ತಿಲ್ಲ. ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ರೈತ ಪ್ರತಿದಿನ ಪ್ರತಿಭಟನೆ ನಡೆಸುವುದು ಮಾತ್ರ ತಪ್ಪಿಲ್ಲ.