Home / Uncategorized / ಲೀಕಾಸುರರ ವಿರುದ್ಧ ಮುಲಾಜಿಲ್ಲದೆ ಕ್ರಮ : ಬೊಮ್ಮಾಯಿ

ಲೀಕಾಸುರರ ವಿರುದ್ಧ ಮುಲಾಜಿಲ್ಲದೆ ಕ್ರಮ : ಬೊಮ್ಮಾಯಿ

Spread the love

ಬೆಂಗಳೂರು,ಜ.27-ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದ ಪ್ರಥಮ ದರ್ಜೆ ಸಹಾಯಕ(ಎಫ್‍ಡಿಎ) ಹುದ್ದೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಅವರ ವಿರುದ್ದ ಕ್ರಮ ಜರುಗಿಸಲು ಸಿಸಿಬಿ ಪೊಲೀಸರಿಗೆ ಸೂಚನೆ ಕೊಟ್ಟಿರುವುದಾಗಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಗೋವಿಂದಪುರ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಕಾನೂನು ಮೂಲಕವೇ ಕ್ರಮ ಜರುಗಿಸಲಾಗುವುದು ಎಂದರು.  ಈಗಾಗಲೇ ಸಿಸಿಬಿ ಪೊಲೀಸರು ಕೆಲವು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತರಿಂದ ಕೆಲವು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ತಲೆಮರೆಸಿಕೊಂಡಿರುವವರು ಎಲ್ಲೇ ಹೋದರೂ ಬಿಡುವುದಿಲ್ಲ. ಕಾನೂನಿನ ಪ್ರಕಾರ ಯಾರಿಗೆ ಯಾವ ಶಿಕ್ಷೆ ಆಗಬೇಕೋ ಅದು ಆಗೇ ಆಗುತ್ತದೆ ಎಂದು ಗುಡುಗಿದರು. ಈ ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಶಂಕೆಯಿದೆ. ಆದಷ್ಟು ಬೇಗ ಅವರನ್ನು ಸಹ ಬಂಧಿಸಬೇಕೆಂದು ಸಿಸಿಬಿ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ತನಿಖೆ ಇಲ್ಲಿಗೆ ಮುಕ್ತಾಯವಾಗುವುದಿಲ್ಲ.

ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಮುಂದುವರೆಯುತ್ತೇವೆ ಎಂದರು.  ಕೆಪಿಎಸ್‍ಸಿಯ ಎಫ್‍ಡಿಎ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡವರೂ ಸಹ ಆರೋಪಿಗಳೇ. ಅವರು ಯಾವ ಕಾರಣಕ್ಕಾಗಿ ಪಡೆದುಕೊಂಡಿದ್ದರು, ಕೊಟ್ಟವರ್ಯಾರು, ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಲ್ಲವೂ ಕೂಡ ತನಿಖೆಯಿಂದ ಬಹಿರಂಗವಾಗಬೇಕು. ಹೀಗಾಗಿ ಸಮಗ್ರ ತನಿಖೆ ನಡೆಸಲು ಸೂಚನೆ ಕೊಟ್ಟಿರುವುದಾಗಿ ತಿಳಿಸಿದರು.

ತಪ್ಪಿತಸ್ಥರ ವಿರುದ್ದ ಮುಲಾಜಿಲ್ಲದೆ ಕ್ರಮ ಜರುಗಿಸಲು ಸೂಚಿಸಲಾಗಿದೆ. ತನಿಖೆಯು ಅತ್ಯಂತ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆ. ತನಿಖೆಯು ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ದೆಹಲಿಯಲ್ಲಿ ನಿನ್ನೆ ರೈತ ಹೋರಾಟದ ವೇಳೆ ನಡೆದ ಗಲಭೆಯು ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ. ನಿಜವಾದ ರೈತರು ಎಂದಿಗೂ ಇಂತಹ ಅಹಿಂಸಾ ಮಾರ್ಗವನ್ನು ಹಿಡಿಯವುದಿಲ್ಲ.

ಪ್ರತಿಭಟನೆ ನೆಪದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿರಬಹುದೆಂದು ಶಂಕಿಸಿದರು. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಘಟನೆ ಕುರಿತಂತೆ ಮಾಹಿತಿ ಪಡೆದಿದ್ದಾರೆ ಎಂದರು.

ಘಟನೆ ನಡೆದಾಗ ಎಲ್ಲ ಪಕ್ಷಗಳು ರಾಜಕೀಯ ಬಣ್ಣ ಕಟ್ಟುವುದು ಸರ್ವೇಸಾಮಾನ್ಯ. ಪೊಲೀಸರ ಮೇಲೆ ಹಲ್ಲೆ ಹಾಗೂ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದವರು ಈ ರೀತಿ ನಡೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರವೇ ಕ್ರಮ ಜರುಗಿಸಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರದ ವ್ಯಾಪ್ತಿಯೂ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸ್ ಠಾಣೆಗಳು ಹೆಚ್ಚಾಗಬೇಕಾಗಿದೆ. ಪೊಲೀಸ್ ಆಡಳಿತವನ್ನು ಪುನರ್‍ವಿಂಗಡಣೆ ಮಾಡಬೇಕು ಎಂದರು.

ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳನ್ನು ಪುನರ್ ವಿಂಗಡಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದ ಅವರು, ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪ್ರಕರಣ ನಡೆದ ನಂತರ ಗೋವಿಂದಪುರದಲ್ಲಿ ನೂತನ ಪೊಲೀಸ್ ಠಾಣೆಯನ್ನು ತೆರೆಯುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಜಿಹಳ್ಳಿ ಠಾಣೆ ವ್ಯಾಪ್ತಿಯಲ್ಲಿದ್ದ ಗೋವಿಂದಪುರದ ವಿಸ್ತೀರ್ಣ, ಜನಸಂಖ್ಯೆ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನೂತನ ಠಾಣೆ ತೆರೆಯಲು ಅನುಮತಿ ನೀಡಲಾಯಿತು ಎಂದು ಹೇಳಿದರು.

ನೂತನ ಪೊಲೀಸ್ ಠಾಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್, ಸಂಸದ ಪಿ.ಸಿ.ಮೋಹನ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಡಿಸಿಪಿ ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗಾಯಕ್ಕೆ ನಮ್ಮಿಂದ್ಲೆ ಬ್ಯಾಂಡೇಜ್‌ ಮಾಡಿಸ್ತಾರ್ರೀ…

Spread the love ಹುಬ್ಬಳ್ಳಿ: ರಕ್ತ ಪರೀಕ್ಷೆಗೆ ಹಣ ಕೇಳ್ತಾರ, ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್‌ ಮಾಡಿಸ್ತಾರ, ಔಷಧಿಗಳನ್ನು ಹೊರಗಡೆಯಿಂದ ತರಾಕ ಹೇಳ್ತಾರ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ