Home / Uncategorized / C.C.B.ಪೊಲೀಸರ ಸಂಕೋಲೆಯಲ್ಲಿ ರಾಧಿಕಾ

C.C.B.ಪೊಲೀಸರ ಸಂಕೋಲೆಯಲ್ಲಿ ರಾಧಿಕಾ

Spread the love

ಬೆಂಗಳೂರು,ಜ.8- ತಮ್ಮ ಬ್ಯಾಂಕ್ ಖಾತೆಗೆ 75 ಲಕ್ಷ ಹಣ ಜಮಾವಣೆಯಾದ ಬಗ್ಗೆ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಇಂದು ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದ ಜ್ಯೋತಿಷಿ ಯುವರಾಜ್ ಮತ್ತು ನಿರ್ಮಾಪಕರೊಬ್ಬರಿಂದ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಒಟ್ಟು 75 ಲಕ್ಷ ರೂ. ಜಮಾವಣೆ ಯಾಗಿತ್ತು.

ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ಸಿಸಿಬಿ ಎಸಿಪಿ ನಾಗರಾಜ್ ಅವರು ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೀಗಾಗಿ ಇಂದು ತಮ್ಮ ಸಹೋದರ ರವಿರಾಜ್ ಅವರ ಜೊತೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿ ಎಸಿಪಿ ನಾಗರಾಜ್ ಅವರ ಮುಂದೆ ವಿಚಾರಣೆಗೆ ಹಾಜರಾದರು. ಹಣ ವರ್ಗಾವಣೆಯಾದ ಕುರಿತಂತೆ ಸಿಸಿಬಿ ಪೊಲೀಸರು 44ಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿ ಸಿದ್ದಪಡಿಸಿಕೊಂಡು ರಾಧಿಕಾ ಅವರಿಂದ ಉತ್ತರ ಪಡೆದುಕೊಂಡರು ಎನ್ನಲಾಗಿದೆ.

ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಅವರು, ನಾಟ್ಯರಾಣಿ ಶಾಂತಲಾ ಚಿತ್ರದಲ್ಲಿ ನಟಿಸಲು 75 ಲಕ್ಷ ರೂ.ಗಳ ಮುಂಗಡ ಹಣ ಪಡೆದಿದ್ದೆ.
ಯುವರಾಜ್ ಅವರ ಖಾತೆಯಿಂದ 15 ಲಕ್ಷ ಹಾಗೂ ನಿರ್ಮಾಪಕರ ಖಾತೆಯಿಂದ 60 ಲಕ್ಷ ಹಣ ನನ್ನ ಖಾತೆಗೆ ವರ್ಗಾವಣೆಯಾಗಿತ್ತು. ಚಿತ್ರದಲ್ಲಿ ನಟಿಸುವ ಕುರಿತಂತೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಆದರೂ ನನ್ನ ಖಾತೆಗೆ 75 ಲಕ್ಷ ವರ್ಗಾವಣೆಯಾಗಿತ್ತು. ನಾವು ಜ್ಯೋತಿಷಿ ಯುವರಾಜ್ ಒಳ್ಳೆಯ ವ್ಯಕ್ತಿ ಎಂದು ಭಾವಿಸಿದ್ದೆವು. ಇದೀಗ ಅವರ ಬಣ್ಣ ಬಯಲಾಗಿದೆ. ಹೀಗಾಗಿ ಜಮಾವಣೆಯಾದ ಹಣವನ್ನು ವಾಪಸ್ ಮಾಡಲಾಗುವುದು. ಇದೇ ವಿಚಾರವನ್ನು ಸಿಸಿಬಿ ವಿಚಾರಣೆ ಸಂದರ್ಭದಲ್ಲೂ ತಿಳಿಸಲಿದ್ದೇನೆ ಎಂದರು.

ತಮ್ಮ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಎರಡು ದಿನಗಳ ಹಿಂದಷ್ಟೆ ಸಹೋದರ ರವಿರಾಜ್ ಅವರೊಂದಿಗೆ ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಹಣದ ಬಗ್ಗೆ ಮಾಧ್ಯಮಗಳ ಮುಂದೆ ವಿವರಣೆ ನೀಡಿದ್ದರು. ಈ ನಡುವೆಯೇ ಸಿಸಿಬಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರಿಂದ ತನಿಖಾಧಿಕಾರಿಗಳ ಮುಂದೆ ರಾಧಿಕಾ ಹಾಜರಾಗಿದ್ದಾರೆ.

ಪ್ರಶ್ನೆಗಳ ಸುರಿಮಳೆ: ನಿಮಗೆ ಯುವರಾಜ್ ಎಷ್ಟು ವರ್ಷದಿಂದ ಪರಿಚಯ? ಅವರ ಮತ್ತು ನಿಮ್ಮ ಮಧ್ಯೆ ಯಾವ ರೀತಿಯ ಆರ್ಥಿಕ ವ್ಯವಹಾರವಿದೆ? ಅವರು ನಿಮ್ಮ ಖಾತೆಗೆ 15 ಲಕ್ಷ ಹಣವನ್ನು ಏಕೆ ಹಾಕಿದ್ದಾರೆ? 60 ಲಕ್ಷ ಹಣವನ್ನು ನಿಮ್ಮ ಖಾತೆಗೆ ಹಾಕಿರುವ ವ್ಯಕ್ತಿ ಯಾರು? ಯಾವ ಉದ್ದೇಶಕ್ಕಾಗಿ ಆ ಹಣ ಹಾಕಿದ್ದಾರೆ? ಒಂದು ಸಿನಿಮಾಗೆ ನೀವು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದುವರೆಗೂ ಎಷ್ಟು ಸಿನಿಮಾ ಮಾಡಿದ್ದೀರಿ? ಸಿನಿಮಾ ನಟನೆ ಬಿಟ್ಟು ಬೇರೆ ಏನಾದರೂ ವ್ಯವಹಾರ ಮಾಡುತ್ತಿದ್ದೀರಾ ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಿಸಿಬಿ ತನಿಖಾಧಿಕಾರಿಗಳು ಉತ್ತರ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದ್ದು, ಅದು ನಿಮ್ಮದೆಯೇ, ಯಾವ ವಿಚಾರವಾಗಿ ಮಾತನಾಡಿದ್ದೀರಾ ಎಂಬ ಬಗ್ಗೆಯೂ ರಾಧಿಕಾ ಅವರಿಂದ ಹೇಳಿಕೆ ಪಡೆಯಲಾಗಿದೆ.

ನಿಮಗೆ ರಾಜಕಾರಣಿಗಳ ಪರಿಚಯವಿದೆಯೇ? ಅದರಲ್ಲೂ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳ ಪರಿಚಯದ ಬಗ್ಗೆಯೂ ರಾಧಿಕಾರ ಅವರಿಂದ ತನಿಖಾಧಿಕಾರಿಗಳು ಉತ್ತರ ಪಡೆದಿದ್ದಾರೆ.


Spread the love

About Laxminews 24x7

Check Also

ಗಾಯಕ್ಕೆ ನಮ್ಮಿಂದ್ಲೆ ಬ್ಯಾಂಡೇಜ್‌ ಮಾಡಿಸ್ತಾರ್ರೀ…

Spread the love ಹುಬ್ಬಳ್ಳಿ: ರಕ್ತ ಪರೀಕ್ಷೆಗೆ ಹಣ ಕೇಳ್ತಾರ, ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್‌ ಮಾಡಿಸ್ತಾರ, ಔಷಧಿಗಳನ್ನು ಹೊರಗಡೆಯಿಂದ ತರಾಕ ಹೇಳ್ತಾರ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ