ಬಳ್ಳಾರಿ: “ಯಾವ ರಾಕ್ಷಸರು ಎಷ್ಟೇ ಅಟ್ಟಹಾಸ ಮೆರೆದರೂ ಬಳ್ಳಾರಿ ಶಾಂತಿಯುತವಾಗಿದೆ, ಅದು ಹಾಗೆ ಇರುವಂತೆ ನಾವು ಯಾವತ್ತೂ ನೋಡಿಕೊಳ್ಳುತ್ತೇವೆ” ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಘರ್ಷಣೆಯ ಕುರಿತು ಬಳ್ಳಾರಿಯಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “FIR ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾನು ಜಾಸ್ತಿ ಮಾತನಾಡಿ ಪ್ರಕರಣವನ್ನು ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಹುಡುಗ ತೀರಿಕೊಂಡಿದ್ದು, ನಾವೆಲ್ಲ ದುಃಖದಲ್ಲಿದ್ದೇವೆ. ನಾನು ಯಾರ ಬಗ್ಗೆಯೂ ಏನೂ ಮಾತನಾಡಲು ಹೋಗುವುದಿಲ್ಲ. ಯಾಕೆಂದರೆ ಅವರ ಮೈಂಡ್‌ಸೆಟ್, ಕ್ಯಾರೆಕ್ಟರ್ ಹೇಗೆ ಅಂತ ನಿಮಗೆಲ್ಲ ಗೊತ್ತು. ಇಡೀ ರಾಜ್ಯದ ಜನತೆಗೂ ಗೊತ್ತು. ನಾನೇನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ” ಎಂದರು.
“ನಾಳೆ ನಮ್ಮ ವಾಲ್ಮೀಕಿ ಅಜ್ಜನ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡುತ್ತಿದ್ದೇವೆ. ಅಜ್ಜನ ಕಾರ್ಯಕ್ರಮ ನಿಲ್ಲಿಸಬೇಕೆಂದೇ ಹೀಗೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಜ್ಜನ ಕಾರ್ಯಕ್ರಮ ನಿಲ್ಲಬಾರದು. ಕಾರ್ಯಕ್ರಮ ನಿಲ್ಲಿಸಿದರೆ ತೀರಿಕೊಂಡ ಹುಡುಗನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ನಮ್ಮವರು, ಸ್ನೇಹಿತರು, ಹಿತೈಷಿಗಳು ಹೇಳಿದ್ದಾರೆ” ಎಂದು ತಿಳಿಸಿದರು.
“ಅವನು (ಜನಾರ್ದನ ರೆಡ್ಡಿ) ಜೀವನದಲ್ಲಿ ಯಾವತ್ತೂ ನಿಜ ಹೇಳಿದವನಲ್ಲ. ಇಂತಹ ಕೆಲಸಗಳನ್ನೇ ಮಾಡಿಕೊಂಡು ಬಂದವ. ಅವನು ಹೇಳಿದಕ್ಕೆಲ್ಲ ನಾನು ಉತ್ತರ ಕೊಟ್ಟುಕೊಂಡು ಹೋಗಲು ಆಗಲ್ಲ. ಜನಾರ್ದನ ರೆಡ್ಡಿ ಮನೆ ಮುಂದೆ ಯಾರೂ ಬ್ಯಾನರ್ ಹಾಕಿಲ್ಲ. ಅವನು ನೀಚ. ರಸ್ತೆಯಲ್ಲಿ ಬ್ಯಾನರ್ ಹಾಕಿದ್ದು, ಅದನ್ನು ನನ್ನ ಮನೆ ಮುಂದೆ ಹಾಕಿದ್ದಾರೆ ಎಂದು ಅವನೇ ಕ್ರಿಯೆಟ್ ಮಾಡಿದ್ದಾನೆ. ಒಬ್ಬ ಮಾಜಿ ಮಂತ್ರಿ, ಶಾಸಕ ಆಗಿದ್ದವನು ರಸ್ತೆಗೆ ಬಂದು ಈ ಕೆಲಸ ಮಾಡಿದ್ದಾನೆ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಘಟನೆಯ ವೇಳೆ ಆಂಧ್ರ, ತೆಲಂಗಾಣದಿಂದ ಜನ ಬಂದಿದ್ದರೇ ಎಂಬ ಪ್ರಶ್ನೆಗೆ, “ಯಾವನೋ ಬೇರೆ ಊರಿನಿಂದ ಬಂದು ನಮ್ಮ ಬಳ್ಳಾರಿಯನ್ನು ಭಯ ಬೀಳಿಸಲು ಸಾಧ್ಯವಿಲ್ಲ. ನಮ್ಮವರು ಧೈರ್ಯವಂತರಿದ್ದಾರೆ. ಯಾರೇ, ಎಂಥವರೇ ಬಂದರೂ ಎದುರಿಸುವ ಶಕ್ತಿ ಇದೆ. ಅವರು ಹೇಡಿಗಳು, ಬೇರೆ ಕಡೆಯಿಂದ ಯಾರನ್ನೋ ಕರೆದುಕೊಂಡು ಬರಬಹುದು. ಬಳ್ಳಾರಿಯ ಜನತೆ ಇಂಥವುಗಳಿಗೆಲ್ಲ ಹೆದರುವಂತವರಲ್ಲ” ಎಂದರು.
Laxmi News 24×7