ಬೆಂಗಳೂರು: ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವನ್ನು ತಡೆಹಿಡಿಯಲು, ಜೀವನೋಪಾಯದ ಹಕ್ಕನ್ನು ಬಲಪಡಿಸಲು ಮತ್ತು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನೆಗಳನ್ನು ನಡೆಸುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಮುಂದಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಕೋರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಶನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಮೂಲ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಉದ್ಯೋಗದ ಬೇಡಿಕೆ ಮತ್ತು ಹಕ್ಕು ಆಧಾರಿತವಾಗಿತ್ತು. ಹೊಸ ಕಾಯ್ದೆಯು ಉದ್ಯೋಗದ ದಿನಗಳನ್ನು 100ರಿಂದ 125ಕ್ಕೆ ಏರಿಸಿದರೂ, ಯೋಜನೆ ಅನುಷ್ಠಾನದಲ್ಲಿ ಕೇಂದ್ರದ ನಿಗದಿತ ಅನುದಾನದ ಖಾತ್ರಿಯಿರುವುದಿಲ್ಲ. ಕೇಂದ್ರದ ಹಣಕಾಸು ಹೊಣೆಗಾರಿಕೆಯನ್ನು ಪ್ರತಿ ರಾಜ್ಯದ “ಅಧಿಸೂಚಿತ” ಪ್ರದೇಶಕ್ಕೆ “ಮಾನದಂಡ ಹಂಚಿಕೆ”ಗೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ಕೇಂದ್ರವು 60% ಮಾತ್ರ ನೀಡುತ್ತದೆ (ಬಹುತೇಕ ರಾಜ್ಯಗಳಲ್ಲಿ). ಇದರಿಂದಾಗಿ, 125 ದಿನಗಳ ಕಾಯ್ದೆಬದ್ಧ ಭರವಸೆ ಪೂರ್ಣವಾಗಿರದೆ. ಕೇಂದ್ರವು ನಿಗದಿ ಮಾಡುವ ಹಣಕಾಸು ಮಿತಿಗೆ ಒಳಪಟ್ಟಿರುತ್ತದೆ. ಇದರಿಂದ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ನಿಜವಾದ ಬೇಡಿಕೆ ಇದ್ದರೂ ಹಣದ ಅಭಾವ ಉಂಟಾಗಬಹುದೆಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.
ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರವು “ವಸ್ತುನಿಷ್ಠ ನಿಯತಾಂಕಗಳ” ಆಧಾರದ ಮೇಲೆ ರಾಜ್ಯವಾರು ಮಾನದಂಡ ಹಂಚಿಕೆ ನಿಗದಿ ಮಾಡುತ್ತದೆ. ಈ ನಿಯತಾಂಕಗಳು ಕಾಯ್ದೆಯಲ್ಲಿ ಸೇರಿರದೆ, ಯಾವುದೇ ಸಮಯದಲ್ಲಿ ಬದಲಾಯಿಸಬಹುದು. ಇದರಿಂದಾಗಿ ಬೇಡಿಕೆ-ಚಾಲಿತ ವ್ಯವಸ್ಥೆಯು, ಸರಬರಾಜು-ಚಾಲಿತ, ಮೇಲಿನಿಂದ-ಕೆಳಗಿನ ವ್ಯವಸ್ಥೆಯಾಗಿ ಮಾರ್ಪಡುವ ಅಪಾಯವಿದೆ. ಇದು ಮೂಲ ಕಾಯ್ದೆಯಲ್ಲಿರುವ ಸಹಭಾಗಿತ್ವದ ವಿಧಾನಕ್ಕೆ (ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಮಿಕ ಬಜೆಟ್, ಗ್ರಾಮಗಳ ಬೇಡಿಕೆಗೆ ಅನುಗುಣವಾದ ಹಂಚಿಕೆ) ವಿರುದ್ಧವಾಗಿದೆ ಎಂದಿದ್ದಾರೆ.
Laxmi News 24×7