ಹುಬ್ಬಳ್ಳಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ. ವಿಠ್ಠಲ ಕರಾಡೆ(29) ಕೊಲೆಯಾದ ಯುವಕ. ಕೊಲೆ ಮಾಡಿದ ಆರೋಪಿಗಳನ್ನು ಘಟನೆ ನಡೆದ ಅರ್ಧ ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಿದ್ದೇನು? ಮೂಲತಃ ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿಯಾದ ವಿಠ್ಠಲನನ್ನು, ಹುಣಸಿಕಟ್ಟಿ ಗ್ರಾಮಕ್ಕೆ ಪತ್ನಿ ಮನೆಗೆ ಬಂದಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಿಸಾಕಿದ್ದರು. ಹುಬ್ಬಳ್ಳಿ, ಕಲಘಟಗಿ, ತಡಸ ಸೇರಿದಂತೆ ಧಾರವಾಡ ಸುತ್ತಮುತ್ತಲು ಬೈಕ್ ಕಳ್ಳತನದಲ್ಲಿ ಕುಖ್ಯಾತಿ ಪಡೆದಿದ್ದ ವಿಠ್ಠಲನನ್ನು ಆತನ ಸಂಬಂಧಿಕರೇ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯಾದ ಅರ್ಧ ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಕಲಘಟಗಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಗೀಡಾದ ವಿಠ್ಠಲ್ ಹುಬ್ಬಳ್ಳಿಯ ವಿದ್ಯಾನಗರ, ನವನಗರ, ಹುಬ್ಬಳ್ಳಿ ಗ್ರಾಮೀಣ, ತಡಸ ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಅಲ್ಲದೇ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಆ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಕೊಲೆ ಮಾಡಿದ ಆರೋಪಿಗಳನ್ನು ಪುಂಡಲೀಕ ಭೀಮಪ್ಪ ತೆಗ್ಗಣ್ಣನವರ ಹಾಗೂ ಅಣ್ಣಪ್ಪ ಕುರಡಿ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿಯ ರಸ್ತೆ ಪಕ್ಕದಲ್ಲಿ ವಿಠ್ಠಲ್ನ ಜೊತೆ ಜಗಳ ತೆಗೆದ ಆರೋಪಿಗಳು, ಅಲ್ಲಿಯೇ ಕೊಲೆ ಮಾಡಿ ರಸ್ತೆಯ ಪಕ್ಕದಲ್ಲೇ ಆತನ ಶವವನ್ನು ಎಸೆದು ಪರಾರಿಯಾಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.
ವೃತ್ತಿಯಲ್ಲಿ ಚಾಲಕನಾಗಿದ್ದ ವಿಠ್ಠಲ್, ದುಡಿಯುವುದನ್ನು ಬಿಟ್ಟು ಸಲೀಸಾಗಿ ಹಣ ಮಾಡುವ ಉದ್ದೇಶದಿಂದ ಕಳ್ಳತನದ ದಾರಿ ಹಿಡಿದಿದ್ದ. ಹಳೇ ವೈಷಮ್ಯವೇ ಕೊಲೆಗೆ ಕಾರಣ ಇರಬಹುದೆಂದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಅರ್ಧಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಕಲಘಟಗಿ ಪೊಲೀಸರ ಕಾರ್ಯಕ್ಕೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7