ಬಾಗಲಕೋಟೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮ್ಯೂಸಿಕ್ ಮೈಲಾರಿ ಎಂದೇ ಖ್ಯಾತಿ ಪಡೆದಿರುವ ಜಾನಪದ ಕಲಾವಿದ ಮೈಲಾರಿಯನ್ನು ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ.
2025ರ ಅಕ್ಟೋಬರ್ 10ರಂದು 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಈತನ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಮೈಲಾರಿ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರಮುಖ ಆರೋಪಿ ಮೈಲಾರಿಯನ್ನು ಬಂಧಿಸಿದ್ದಾರೆ.ಕಳೆದ ಎರಡು ತಿಂಗಳ ಹಿಂದೆ ಲಾಡ್ಜ್ವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಬೆಳಗಾವಿ ಜಿಲ್ಲೆಯ ಚಿಕ್ಕೂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಬಾಗಲಕೋಟೆ ಜಿಲ್ಲೆಯ ನಿವಾಸಿ ಆಗಿರುವುದರಿಂದ ಪ್ರಕರಣವನ್ನು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವಿಜಯಪುರ ಜಿಲ್ಲೆಯ ತಿಕೋಟ ಬಳಿ ಮೈಲಾರಿಯನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ಮಾಹಿತಿ ಹೀಗಿದೆ; ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ”ಡಿ.14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. 15 ವರ್ಷದ ಬಾಲಕಿ ಮೇಲೆ ಮೈಲಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ನೀಡಲಾಗಿತ್ತು. ಇತರ 6 ಮಂದಿ ಮೇಲೆ ಹಲ್ಲೆ ಹಾಗೂ ನಿಂದನೆ ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿತ್ತು. ಚಿಕ್ಕೋಡಿಯಲ್ಲಿ ಎಫ್ಐಆರ್ ಆದ ಬಳಿಕ ನಮಗೆ ಕೇಸ್ ವರ್ಗಾವಣೆ ಆಗಿತ್ತು. ಅಲ್ಲದೆ, ತನಿಖೆಗಾಗಿ ಮೂರ್ನಾಲ್ಕು ತಂಡಗಳನ್ನು ರಚಿಸಿದ್ದೆವು” ಎಂದು ತಿಳಿಸಿದರು.
”ಪ್ರಮುಖ ಆರೋಪಿ ಮೈಲಾರಿ ಮೇಲೆ ಜಾಮೀನುರಹಿತ ಸೆಕ್ಷನ್ ಹಾಕಲಾಗಿದೆ. ಹೀಗಾಗಿ ಆತನನ್ನು ತಕ್ಷಣ ಬಂಧನ ಮಾಡಿದ್ದೇವೆ. ವೈದ್ಯಕೀಯ ಪರೀಕ್ಷೆ ಬಳಿಕ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ಉಳಿದ 6 ಮಂದಿ ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆರೋಪಿಯ ಸ್ಥಳ ಮಹಜರು ಮಾಡಲಾಗಿದೆ. ಸ್ಥಳೀಯ ಮಾಹಿತಿ, ಪೋನ್ ಕರೆಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ಕಾರಿನಲ್ಲಿ ಹೋಗುತ್ತಿರುವಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ” ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿಯು ಮ್ಯೂಸಿಕ್ ಮೈಲಾರಿ ಎಂದೇ ಖ್ಯಾತಿ ಪಡೆದಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಪೇಕ್ಷಕರನ್ನು ರಂಜಿಸುತ್ತಿದ್ದ. ಯುಟ್ಯೂಬ್ ಮೂಲಕವೂ ಲಕ್ಷಾಂತರ ವೀಕ್ಷಕರ ಗಮನ ಸೆಳೆದಿದ್ದ ಮೈಲಾರಿ, ಈಗ ಜೈಲು ಸೇರಿದ್ದಾನೆ. ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Laxmi News 24×7