ಲಾಠಿ ಚಾರ್ಜ್ ಪ್ರಕರಣದ ವರದಿ ಸರ್ಕಾರಕ್ಕೆ ಸಲ್ಲಿಕೆ; ಅನ್ಯಾಯ ನಡೆದ ಸ್ಥಳದಲ್ಲೇ ನ್ಯಾಯಕ್ಕಾಗಿ ಮತ್ತೆ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ
ಚಿಕ್ಕೋಡಿ: ಕಳೆದ ವರ್ಷ ಡಿಸೆಂಬರ್ 10ರಂದು ಬೆಳಗಾವಿಯ ಸುವರ್ಣ ಸೌಧದ ಬಳಿ ಲಿಂಗಾಯತ ಪಂಚಮಸಾಲಿ ಸಮಾಜದವರ ಮೇಲೆ ನಡೆಸಲಾದ ಲಾಠಿ ಪ್ರಹಾರ ಪೂರ್ವ ನಿಯೋಜಿತವಾಗಿತ್ತು. ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಅಂದು ನಡೆಸಲಾದ ಲಾಠಿ ಚಾರ್ಜ್ ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿ ನಿವೃತ್ತ ನ್ಯಾಯಾಧೀಶರ ನಿಯೋಗವನ್ನು ರಚಿಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಆ ಸೂಚನೆಯಂತೆ ಇವತ್ತು ಅಂತಿಮವಾಗಿ ನಿವೃತ್ತ ನ್ಯಾಯಾಧೀಶರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು.
ಅಥಣಿ ಪಟ್ಟಣದಲ್ಲಿಂದು ಚಿಕ್ಕೋಡಿಯಮಾತನಾಡಿದ ಶ್ರೀಗಳು, ಕಳೆದ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ನಡೆಸಿಕೊಂಡಿದ್ದೆವು. ಆದರೆ, ಹೋರಾಟಗಾರ ಮೇಲೆ ಸರ್ಕಾರ ಲಾಠಿ ಚಾರ್ಜ್ ನಡೆಸುವ ಮೂಲಕ ದಬ್ಬಾಳಿಕೆ ನಡೆಸಿತು. ಯಾರ್ಯಾರು ಅವತ್ತು ಲಾಠಿ ಚಾರ್ಜ್ಗೆ ಒಳಗಾಗಿದ್ದರೋ, ನಿಯೋಗದ ಮುಂದೆ ಸಾಕ್ಷಿ ನೀಡಿದ್ದಾರೆ. ಹೇಳಿಕೆ ಆಧರಿಸಿ ನಿವೃತ್ತ ನ್ಯಾಯಾಧೀಶರು ವರದಿ ಸಿದ್ಧಪಡಿಸಿ ಇವತ್ತು ಸಲ್ಲಿಕೆ ಮಾಡಿದ್ದಾರೆ. ಸತ್ಯದ ಪರವಾಗಿ ವರದಿ ಸಲ್ಲಿಕೆಯಾಗಿದೆ ಎಂಬ ವಿಶ್ವಾಸ ನಮಗಿದೆ. ಹೈಕೋರ್ಟ್ನಲ್ಲಿ ನಮ್ಮ ಅರ್ಜಿ ಪುರಸ್ಕರಿಸಿದ ಏಕಸದಸ್ಯ ಹಾಗೂ ದ್ವಿಸದಸ್ಯ ಪೀಠ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆದೇಶ ಮಾಡಿತ್ತು. ಆ ಪ್ರಕಾರ ಇವತ್ತು ಅಂತಿಮವಾಗಿ ವರದಿ ಸಲ್ಲಿಕೆಯಾಗಿದೆ. ಹೈಕೋರ್ಟ್ ಯಾವ ರೀತಿ ಆದೇಶ ಮಾಡುತ್ತದೆ ಎಂದು ಕಾದುನೋಡಬೇಕು ಎಂದು ಹೇಳಿದರು.
Laxmi News 24×7