ಹೈನೋದ್ಯಮದಿಂದ ವರ್ಷಕ್ಕೆ ₹1.5 ಕೋಟಿ ಆದಾಯ: ದೊಡ್ಡ ಮನೆ ಕಟ್ಟಿ ಹಾಲಿನ ಡಬ್ಬಿಯೊಂದಿಗೆ ಹಸುವಿನ ಪ್ರತಿಕೃತಿ ನಿರ್ಮಿಸಿದ ಕುಟುಂಬ
ಕುಟುಂಬ ಸದಸ್ಯರ ಒಗ್ಗಟ್ಟು, ಕಠಿಣ ಶ್ರಮದ ಫಲವಾಗಿ ಎರಡು ಹಸುಗಳಿಂದ ಆರಂಭವಾದ ಇವರ ಹೈನುಗಾರಿಕೆ ಇಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.
ಕೊಲ್ಲಾಪುರ(ಮಹಾರಾಷ್ಟ್ರ):ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಕುಟುಂಬದ ಒಗ್ಗಟ್ಟಿನ ಫಲವಾಗಿ ಕೊಲ್ಲಾಪುರದ ನೂಲ್ ಎಂಬಲ್ಲಿನ ಸಾವಂತ್ ಸಹೋದರರ ಕುಟುಂಬ ಹೈನುಗಾರಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ.

ಕೃಷಿ ಭೂಮಿಯಲ್ಲಿ ಉಂಟಾದ ತೊಂದರೆಯಿಂದ ಹೈನುಗಾರಿಕೆಯತ್ತ ಮನಸ್ಸು ಮಾಡಿದ ಈ ಕುಟುಂಬ ಇದೀಗ ವಾರ್ಷಿಕವಾಗಿ 1.5 ಕೋಟಿ ರೂ ಆದಾಯ ಗಳಿಸುತ್ತಿದೆ. ಹೊಸ ಮನೆ ಕಟ್ಟಿರುವ ಇವರು, ಅದರ ಮೇಲೆ ಆರಡಿ ಎತ್ತರದ ಹಸುವಿನ ಪ್ರತಿಕೃತಿಯನ್ನೂ ಸ್ಥಾಪಿಸಿದ್ದಾರೆ.

ಈ ಹಿಂದೆ, ಸಾವಂತ್ ಕುಟುಂಬಸ್ಥರು ತಮ್ಮ ಪೂರ್ವಜರಿಂದ ಬಂದಿರುವ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ, ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಸಹೋದರರಾದ ಪ್ರಕಾಶ್ ಮತ್ತು ಬಾಳಾಸಾಹೇಬ್ ಸಾವಂತ್ ಅವರು 2004ರಲ್ಲಿ ಸಾಲ ಮಾಡಿ ಎರಡು ಹಸು ಖರೀದಿಸಿ ಡೈರಿ ಉದ್ಯಮ ಪ್ರಾರಂಭಿಸಿದ್ದರು. ಆರಂಭದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದರೂ ಕೂಡಾ, ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದ ಶಕ್ತಿಯಿಂದ ಇದೀಗ ಕೈತುಂಬಾ ಲಾಭ ಗಳಿಸುತ್ತಿದ್ದಾರೆ.
ಸಾವಂತ್ ಕುಟುಂಬಸ್ಥರು
ಒಂದೆರಡು ಹಸುವಿನಿಂದ ನೂರಾರು ಹಸುಗಳ ಸಾಕಣೆ: ಸಾವಂತ್ ಸಹೋದರರು ಆರಂಭದಲ್ಲಿ ಎರಡು ಹಸುಗಳನ್ನು ಕೊಳ್ಳುವ ಮೂಲಕ ತಮ್ಮ ಡೈರಿ ವ್ಯವಹಾರ ಪ್ರಾರಂಭಿಸಿದ್ದರು. 2010ರಲ್ಲಿ ಬ್ಯಾಂಕಿನ ಸಹಾಯದಿಂದ 45 ಹಸುಗಳನ್ನು ಪಡೆದು ಆಧುನಿಕ ಗೋಶಾಲೆ ಪ್ರಾರಂಭಿಸಿದ್ದರು. ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಸುಧಾರಣೆಯ ಬಳಿಕ ಇದೀಗ ಇವರ ಗೋಶಾಲೆಯಲ್ಲಿ 80 ಎಚ್ಎಫ್ ಹಸುಗಳು, 20 ಕರುಗಳು ಮತ್ತು 8 ಎಮ್ಮೆಗಳಿವೆ. ತಮ್ಮದೇ ಆದ ಗಜಾನನ ಸಹಕಾರಿ ಹಾಲು ಸಂಸ್ಥೆಯ ಮೂಲಕ ಕೊಲ್ಹಾಪುರ ಜಿಲ್ಲಾ ಹಾಲು ಉತ್ಪಾದಕರ ಸಂಘಕ್ಕೆ (ಗೋಕುಲಕಾಡ್) ಪ್ರತಿದಿನ 700ರಿಂದ 800 ಲೀಟರ್ ಹಾಲು ಪೂರೈಸುತ್ತಿದ್ದಾರೆ.
ಇವರ ಕುಟುಂಬದಲ್ಲಿ 18 ಸದಸ್ಯರಿದ್ದಾರೆ. ಪ್ರತಿದಿನ ಗೋಶಾಲೆಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಕುಟುಂಬ ಸದಸ್ಯರ ಹೊರತಾಗಿ ಯಾವುದೇ ಕೆಲಸಗಾರರನ್ನು ಇವರು ನೇಮಿಸಿಕೊಂಡಿಲ್ಲ. ಪ್ರಕಾಶ್ ಮತ್ತು ಬಾಳಾಸಾಹೇಬ್ ಸಾವಂತ್, ಪುತ್ರರಾದ ಸಂತೋಷ್, ಋಷಿಕೇಶ್, ಸುಶಾಂತ್, ಪ್ರಶಾಂತ್ ಮತ್ತು ಇವರ ಪತ್ನಿಯರಾದ ರೇವತಿ, ಶಿವಾನಿ, ಐಶ್ವರ್ಯ ಮತ್ತು ರಾಜಶ್ರೀ ಎಲ್ಲರೂ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಪ್ರಕಾಶ್ ಮತ್ತು ಬಾಳಾಸಾಹೇಬ್ ಅವರ ಮಕ್ಕಳೂ ಸಹ ಶಿಕ್ಷಣ ಪಡೆದು ಹೊರಗೆ ಕೆಲಸ ಮಾಡುವ ಬದಲು ಮನೆಯಲ್ಲೇ ಡೈರಿ ವ್ಯವಹಾರದತ್ತ ಗಮನಹರಿಸಿದ್ದಾರೆ. ಕುಟುಂಬದ ಈ ಒಗ್ಗಟ್ಟಿನ ಕಾರಣದಿಂದಾಗಿ ಸಾವಂತ್ ಕುಟುಂಬದ ಮನೆ ಇಂದು ಸ್ವಾವಲಂಬನೆಯ ಸಂಕೇತವಾಗಿದೆ.

ಹಾಲಿನ ಆದಾಯದಲ್ಲಿ ಕೋಟಿ ಮೌಲ್ಯದ ಮನೆ ನಿರ್ಮಾಣ: ಡೈರಿ ಉದ್ಯಮದ ಮೂಲಕ ಪ್ರಗತಿ ಸಾಧಿಸಿರುವ ಸಾವಂತ್ ಕುಟುಂಬ ಇತ್ತೀಚೆಗೆ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ನಿರ್ಮಿಸಿದ್ದಾರೆ. ಈ ಬಂಗಲೆಯ ಮೇಲೆ 6 ಅಡಿ ಎತ್ತರ ಮತ್ತು 8 ಅಡಿ ಉದ್ದದ ಹಸುವಿನ ಪ್ರತಿಕೃತಿ ಮತ್ತು ಹಾಲಿನ ಡಬ್ಬಿಯನ್ನು ಸ್ಥಾಪಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಗೋಕುಲ್ ಶಿರ್ಗಾಂವ್‌ನ ಕುಶಲಕರ್ಮಿಯೊಬ್ಬರು ತಯಾರಿಸಿದ ಈ ಪ್ರತಿಕೃತಿ ಸ್ಥಳೀಯರ ಆಕರ್ಷಣೆಯಾಗಿದೆ.
ಸಾವಂತ್ ಕುಟುಂಬದ ಮನೆಯ ಮೇಲಿರುವ ಹಾಲಿನ ಡಬ್ಬ ಮತ್ತು ಹಸುವಿನ ಪ್ರತಿಕೃತಿ
ಆಧುನಿಕತೆಯತ್ತ ಹೆಜ್ಜೆ:ಗೋಶಾಲೆಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾವಂತ್ ಕುಟುಂಬ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. 25 ಲೀಟರ್ ಹಾಲು ನೀಡುತ್ತಿದ್ದ ಹಸುಗಳು ಈಗ 40 ಲೀಟರ್ ಹಾಲು ನೀಡುತ್ತಿವೆ. ಗೋಕುಲ್ ಹಾಲು ಸಂಘದೊಂದಿಗಿನ ವ್ಯವಹಾರ ಸಂಪರ್ಕಗಳು, ಹಸುವಿನ ಸಗಣಿ ಮಾರಾಟ ಮತ್ತು ಸಾಕಣೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಈ ಉದ್ಯಮಕ್ಕೆ ಹೊಸ ರೂಪ ನೀಡಿದ್ದಾರೆ. ಅಲ್ಲದೆ, ಹೆಚ್ಚು ಹಾಲು ನೀಡುವ ಹಸುಗಳಿಂದ ಸಂತಾನೋತ್ಪತ್ತಿ ಮಾಡುವ ಮೂಲಕ ಹಸುಗಳ ಕೊಟ್ಟಿಗೆಯನ್ನು ಹೆಚ್ಚಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಋಷಿಕೇಶ್ ಪ್ರಕಾಶ್ ಸಾವಂತ್ ತಿಳಿಸಿದರು.
ಸಾವಂತ್ ಕುಟುಂಬ ಗೋಕುಲ್ ಹಾಲಿನ ಸಂಘ, ಜಿಲ್ಲಾ ಪರಿಷತ್ ಪಶುಸಂಗೋಪನಾ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಮತ್ತು ಸ್ಥಳೀಯ ಸಂಸ್ಥೆಗಳಿಂದ ‘ಆದರ್ಶ ಗೋಥಾ’, ‘ಆದರ್ಶ ಶೇತ್ಕರಿ’ ಮತ್ತು ‘ಜಿದ್ದ್ ಪುರಸ್ಕಾರ’ಗಳನ್ನು ಪಡೆದಿದೆ,
Laxmi News 24×7