ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ. ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು ಸೌತ್ ಇಂಡಿಯಾ ಶುಗರ್ ಮಿಲ್ಸ್ ಅಸೋಸಿಯೇಷನ್ ಅಧ್ಯಕ್ಷ ಯೋಗೇಶ್ ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದು ಸಿಎಂ ಸಿದ್ದರಾಮಯ್ಯ ಜೊತೆ ಸಭೆ ಅಗಿದೆ. ರೈತರ ಸಮಸ್ಯೆ ಮತ್ತು ಕಾರ್ಖಾನೆಯ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಸಕ್ಕರೆ ಬೆಲೆ ಹಾಗೂ ಎಥನಾಲ್ ಬೆಲೆ ಹೆಚ್ಚಳ ಮಾಡಿಲ್ಲ. ಹೀಗಾಗಿ ಎಫ್ಆರ್ಪಿ ದರವನ್ನು ಸರಿಯಾದ ಸಮಯಕ್ಕೆ ಕೊಡಲು ಆಗುತ್ತಿಲ್ಲ. ನಾವು ನಮ್ಮ ಬೇಡಿಕೆಯನ್ನು ಇಟ್ಟಿದ್ದೇವೆ. ರಿಕವರಿ ದರ ಬೆಳಗಾವಿಗಿಂತ ಉಳಿದ ಜಿಲ್ಲೆಯಲ್ಲಿ ಕಡಿಮೆ ಇದೆ. ಸಿಎಂ ನಮಗೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವ ಭರವಸೆ ಕೊಟ್ಟಿದ್ದಾರೆ ಎಂದರು.
3,200 ರೂ. ಕೊಡಲು ಸಿದ್ದ: ಪ್ರತಿ ಟನ್ಗೆ 3,200 ರೂ.ಗಳಂತೆ ಮಾತ್ರ ಕೊಡಲು ನಾವು ಸಿದ್ದವಿದ್ದೇವೆ. ಬಹಳ ಕಷ್ಟದಲ್ಲಿ ನಾವು 3,200 ರೂ. ಕೊಡುತ್ತಿದ್ದೇವೆ. ವಿದ್ಯುತ್ ತೆರಿಗೆ ವಿನಾಯಿತಿಗೆ ನಾವು ಕೋರಿದ್ದೇವೆ. ವಾಟರ್ ಟ್ಯಾಕ್ಸ್ ಕಡಿಮೆ ಮಾಡಬೇಕು. ಅದನೆಲ್ಲ ಕಡಿಮೆ ಮಾಡಿದರೆ ಮಾತ್ರ ನಾವು ಪ್ರತಿ ಟನ್ಗೆ 3,250 ರೂ. ಕೊಡುತ್ತೇವೆ ಎಂದು ಹೇಳಿದರು.
ಪ್ರತಿ ಟನ್ 100 ರೂ. ಸರ್ಕಾರವೇ ಕೊಡಬೇಕು ಅಂತ ಸಿಎಂಗೆ ಮನವಿ ಕೊಟ್ಟಿದ್ದೇವೆ. ನಾವೆಲ್ಲಾ ತುಂಬಾ ಕಷ್ಟದಲ್ಲಿ ಇದ್ದೇವೆ. ಸರ್ಕಾರದಿಂದ ಉಳಿದ ಬೆಂಬಲ ಬೆಲೆ ಕೊಡಿ ಎಂದು ಮನವಿ ಮಾಡಿದ್ದೇವೆ. 50 ರೂಪಾಯಿ ನಾವು ಹೆಚ್ಚಿಗೆ ಕೊಡುವುದಿಲ್ಲ. ವಿದ್ಯುತ್ ತೆರಿಗೆ ವಿನಾಯಿತಿ ಕೊಡಲು ಕೇಳಿದ್ದೇವೆ. ಸಕ್ಕರೆ ಮಾಲೀಕರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು. ನಾವು ಒಪ್ಪಿರುವುದು ಪ್ರತಿ ಟನ್ಗೆ 3,200 ರೂ. ಮಾತ್ರ ಎಂದು ಸ್ಪಷ್ಟಪಡಿಸಿದರು.
ಹೆಚ್ಚುವರಿ ಹಣ ಕೊಟ್ಟೇ ಕೊಡಿಸುತ್ತೇವೆ: ಈ ಬಗ್ಗೆ ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ನಾವು ಹೆಚ್ಚುವರಿ ಹಣ ಕೊಟ್ಟೇ ಕೊಡಿಸುತ್ತೇವೆ. ನಾವು ಹೇಳಿದ್ದೇವಲ್ಲ, ಸಿಎಂ ಘೋಷಣೆ ಮಾಡಿದ್ದಾರಲ್ಲ. ಸಕ್ಕರೆ ಕಾರ್ಖಾನೆಯವರು ಏನೇ ಹೇಳಿದರೂ ನಾವು ಕೊಡಿಸುತ್ತೇವೆ. ನಮಗೆ ಕೊಡಿಸುವುದು ಗೊತ್ತು. ಅವರಿಗೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಹೆಚ್ಚುವರಿ ಹಣ ಕೊಡಿಸುತ್ತೇವೆ. ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಇತ್ಯರ್ಥ ಆಗಿದೆ. ಯಾವುದೇ ಗೊಂದಲ ಬೇಡ. ಬೆಳಗಾವಿದು ಮಾತ್ರ ಬೇರೆ ಸಮಸ್ಯೆ ಇದೆ. ನಾವು ಅಲ್ಲಿಯೂ ಹೆಚ್ಚುವರಿ ಹಣ ಕೊಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
Laxmi News 24×7