ಬೆಂಗಳೂರು: ಕೈಗಾರಿಕಾ ವಿವಾದಗಳ ಕಾಯಿದೆಯಡಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ದ ಮೇಲೆ ಕೇಂದ್ರ ಸರ್ಕಾರಕ್ಕೆ ವಿಶಾಲ ನಿಯಂತ್ರಣವಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ. ಇದೊಂದು ‘ರೈಲ್ವೆ ಕಂಪೆನಿ’ಯಾಗಿದ್ದು ಕೇಂದ್ರದ ಸಮ್ಮತಿಯೊಂದಿಗೆ ಕಾರ್ಯನಿರ್ವಹಣೆ ಮಾಡಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ 2019ರಲ್ಲಿ ಬಿಎಂಆರ್‌ಸಿಎಲ್ ಸಾರ್ವಜನಿಕ ಉಪಯುಕ್ತವಾದ ಸೇವೆ ಎಂಬುದಾಗಿ ಹೊರಡಿಸಿದ್ದ ಅಧಿಸೂಚನೆ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆಯ(ಎಸ್ಮಾ) ಅಡಿಯಲ್ಲಿ ಬಿಎಂಆರ್‌ಸಿಎಲ್ ‘ಅಗತ್ಯ ಸೇವೆ’ಗಳು ಎಂಬುದಾಗಿ 2017ರಲ್ಲಿ ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸಿ ಆದೇಶಿಸಿದೆ.
ಕೈಗಾರಿಕಾ ವಿವಾದ ಕಾಯಿದೆಯಡಿ ಎಸ್ಮಾ ಜಾರಿ ಮಾಡಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿಎಂಆರ್‌ಸಿಎಲ್ ಮತ್ತು ಬಿಎಂಆರ್‌ಸಿಎಲ್ ನೌಕರರ ಸಂಘದ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಬಿಎಂಆರ್‌ಸಿಎಲ್‌ನಲ್ಲಿ ಕೇಂದ್ರ ಸರ್ಕಾರದಂತೆ ಶೇ.50ರಷ್ಟು ಷೇರುಗಳನ್ನು ರಾಜ್ಯ ಸರ್ಕಾರ ಹೊಂದಿದ್ದು ಕೆಲವು ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತದೆ. ಆದರೆ, ಪ್ರಮುಖ ಆಡಳಿತಾತ್ಮ ಕ್ರಮಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾರವೇ ಅಂತಿಮವಾಗಿರಲಿದೆ. ರಾಜ್ಯ ಸರ್ಕಾರ ಯಾವುದಾದರೂ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕಾದಲ್ಲಿ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ ಮೆಟ್ರೋ ಸೇವೆಯನ್ನು ಎಸ್ಮಾ ಕಾಯಿದೆಯಡಿ ಅಗತ್ಯ ಸೇವೆ ಎಂಬುದಾಗಿ ಘೋಷಣೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿದೆ.
ಮೆಟ್ರೋ ರೈಲ್ವೆ ಸೇವೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಕಾಯಿದೆಗಳಿಂದ ನಿಯಂತ್ರಣಕ್ಕೊಳಪಡಲಿದೆ. ಮೆಟ್ರೋ ರೈಲ್ವೆಯ ಹಲವು ಕಾರ್ಯಾಚರಣೆಗಳ ಉಸ್ತುವಾರಿ ಹೊಂದಿರುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ಪಡೆದ ನಂತರವೇ ರೈಲ್ವೆ ಸೇವೆ ಪ್ರಾರಂಭಿಸುವುದು ಮತ್ತು ನಿರ್ವಹಣೆ ಮಾಡುವುದಕ್ಕೆ ಅಧಿಕಾರವಿರಲಿದೆ. ಬಿಎಂಆರ್‌ಸಿಎಲ್ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಮಾಡಿಕೊಂಡಿರುವ ಒಪ್ಪಂದದ ಅಡಿಯಲ್ಲಿ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆಗೆ ಅವಕಾಶವಿರಲಿದೆ ಎಂದು ಪೀಠ ಹೇಳಿದೆ.
ಭಾರತೀಯ ರೈಲ್ವೆ ಕಾಯಿದೆ ಮತ್ತು ಕೈಗಾರಿಕಾ ವಿವಾದ ಕಾಯಿದೆ ಅಡಿಯಲ್ಲಿ ಬಿಎಂಆರ್‌ಸಿಎಲ್ ರೈಲ್ವೆ ಕಂಪೆನಿ ಸ್ಥಾನಮಾನ ಹೊಂದಿದೆ. ಈ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರದ ವ್ಯಾಪಕ ಅಧಿಕಾರ ಇರಲಿದ್ದು, ಕೇಂದ್ರ ಸರ್ಕಾರವೇ ಸೂಕ್ತ ಸರ್ಕಾರವಾಗಲಿದ್ದು, ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರಲಿದೆ ಎಂದು ಪೀಠ ಹೇಳಿದೆ.
Laxmi News 24×7