ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತಿದೆ. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದ ಕಂಠೀರವ ಸ್ಟೇಡಿಯಂನಲ್ಲಿ ನ.19ರಂದು ನಡೆಯಲಿರುವ ಐಸಿಡಿಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ಡಾ.ಬಾಬು ಜಗಜೀವನರಾಮ್ ಆಡಿಟೋರಿಯಂ ಮತ್ತು ತರಬೇತಿ ಕೇಂದ್ರದಲ್ಲಿ ಬುಧವಾರ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಚಿವೆ ಮಾತನಾಡಿದರು.
ವಿಶ್ವದಲ್ಲೇ ದೊಡ್ಡದಾದ ಗೃಹ ಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. 2 ಸಾವಿರ ಫಲಾನುಭವಿಗಳ ಹಣ ಸಂಗ್ರಹಿಸಲಾಗಿದ್ದು, ಇದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೇ ಗೃಹಲಕ್ಷ್ಮಿ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮ ಹಾಕಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮಿ ಸೊಸೈಟಿಯನ್ನು ವಿಸ್ತರಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದರು.
ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷ ವರೆಗೆ ಸಾಲ: ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಸಾಲ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು. ಗೃಹಲಕ್ಷ್ಮಿ ಯಶಸ್ಸಿಗೆ ಯಾವ ರೀತಿ ಎಲ್ಲರೂ ಶ್ರಮ ವಹಿಸಿದ್ದೀರೋ ಹಾಗೆಯೇ ಗೃಹಲಕ್ಷ್ಮಿ ಸೊಸೈಟಿಯ ಯಶಸ್ಸಿಗೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
Laxmi News 24×7