ಮೈಸೂರು: ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯವರು ಗಸ್ತು ಹೆಚ್ಚಿಸಿದರೂ ಹುಲಿ ಭಯದಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ.
ಎಲ್ಲೆಲ್ಲಿ ಹುಲಿ ಭಯ?: ಜಿಲ್ಲೆಯ ಸರಗೂರು, ಹೆಚ್.ಡಿ.ಕೋಟೆ ಹಾಗೂ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಅರಣ್ಯ ಪ್ರದೇಶಗಳ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳವಿದೆ. ಇದರಿಂದ ರೈತರು ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದು, ದನಕರುಗಳು ಹಾಗೂ ಮೇಕೆಗಳನ್ನು ಜಮೀನಿಗೆ ಬಿಡದೆ ತಮ್ಮ ಮನೆ ಬಳಿಯೇ ಕಟ್ಟಿದ್ದಾರೆ. ಇನ್ನೊಂದೆಡೆ, ಜನರು ರಸ್ತೆಗಳಲ್ಲಿ ಓಡಾಡಲೂ ಆತಂಕಪಡುತ್ತಿದ್ದಾರೆ. ಗುಂಪುಗುಂಪಾಗಿ ಬೆಳಗಿನ ಹೊತ್ತಲ್ಲಿ ಮಾತ್ರ ಓಡಾಡುತ್ತಿದ್ದು, ರಾತ್ರಿ ಆಗುತ್ತಿದಂತೆ ಯಾರೂ ಮನೆಯಿಂದ ಹೊರಬರುತ್ತಿಲ್ಲ.
3 ಹುಲಿ ದಾಳಿ, ಇಬ್ಬರು ರೈತರು ಸಾವು: ಕಳೆದ 15 ದಿನಗಳಲ್ಲಿ ಮೂರು ಬಾರಿ ಹುಲಿಗಳು ದಾಳಿ ಮಾಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರ ಪರಿಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
15 ದಿನಗಳಿಂದಾಚೆಗೆ ಬಂಡೀಪುರ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮ ಬಡಗಲಪುರ ಗ್ರಾಮದ ರೈತ ಮಾದೇಡೌಡ ಅವರು ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸುವಾಗ ಹುಲಿ ದಾಳಿ ಮಾಡಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಕಳೆದ 3 ದಿನಗಳ ಹಿಂದೆ ದನ ಮೇಯಿಸುತ್ತಿರುವಾಗ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇಂದು (ಶುಕ್ರವಾರ) ಸರಗೂರು ತಾಲೂಕಿನ ಕೂಡಗಿ ಗ್ರಾಮದ ಬಳಿ ದನ ಮೇಯಿಸುತ್ತಿದ್ದ ರೈತ ಲಿಂಗಯ್ಯ ಕೂಡ ಹುಲಿ ದಾಳಿಯಿಂದ ಪ್ರಾಣಬಿಟ್ಟಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					