ಬೆಳಗಾವಿ: ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಹಿಡಿದು ಗಲ್ಲಿಗೇರಿಸಲಾಗಿತ್ತು. ಅವರ ಜೊತೆಗೆ ಇನ್ನೂ ಆರು ಜನರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಮತ್ತೆ ಆರು ಮಂದಿ ಜೀವಾವಧಿ(ಕರಿನೀರಿನ) ಶಿಕ್ಷೆಗೆ ಒಳಗಾಗಿದ್ದರು. ಕಿತ್ತೂರು ನಾಡಿನ ಈ ಹುತಾತ್ಮ ವೀರರು ಬೆಳಕಿಗೆ ಬಾರದೇ ಇರುವುದು ಇತಿಹಾಸಪ್ರಿಯರ ನೋವಿಗೆ ಕಾರಣವಾಗಿದೆ.
ಕಿತ್ತೂರು ಪುಟ್ಟ ಸಂಸ್ಥಾನ ಆದರೂ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಆಂಗ್ಲರಿಗೆ ಮೊಟ್ಟ ಮೊದಲ ಬಾರಿ ಸೋಲಿನ ರುಚಿ ತೋರಿಸಿ ದಿಟ್ಟತನ ಮೆರೆದಿತ್ತು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ ನೇತೃತ್ವದಲ್ಲಿ ಸ್ವಾಭಿಮಾನದ ಕಹಳೆ ಊದಲಾಗಿತ್ತು.ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಬ್ರಿಟಿಷ್ ಐಸಿಎಸ್ ಅಧಿಕಾರಿ ಥ್ಯಾಕರೆಯನ್ನು 1824 ಅಕ್ಟೋಬರ್ 23ರಂದು ಗುರಿಕಾರ ಅಮಟೂರ ಬಾಳಪ್ಪ ತನ್ನ ಬಂದೂಕಿನಿಂದ ಹೊಡೆದುರುಳಿಸುವ ಮೂಲಕ ಕಿತ್ತೂರು ವಿಜಯೋತ್ಸವಕ್ಕೆ ಮುನ್ನುಡಿ ಬರೆದಿದ್ದರು. ಇದಾದ ಬಳಿಕ ಅದೇ ವರ್ಷ ಡಿಸೆಂಬರ್ನಲ್ಲಿ ನಡೆದ ಎರಡನೇ ಯುದ್ಧದಲ್ಲಿ ಕಿತ್ತೂರಿಗೆ ಸೋಲಾಗಿ, ಅಮಟೂರ ಬಾಳಪ್ಪ ವೀರಮರಣ ಅಪ್ಪುತ್ತಾರೆ. ವೀರರಾಣಿ ಚನ್ನಮ್ಮ ಬೈಲಹೊಂಗಲದ ಗೃಹಬಂಧನ ಸೇರುತ್ತಾರೆ. ಸಂಗೊಳ್ಳಿ ರಾಯಣ್ಣ ಸೇರಿ ಮತ್ತಿತರರು ಚದುರಿ ಹೋಗುತ್ತಾರೆ. ಹೀಗೆ 1830ರವರೆಗೆ ರಾಯಣ್ಣನ ನೇತೃತ್ವದಲ್ಲಿ ಹೋರಾಟ ಮುಂದುವರಿಯುತ್ತದೆ. ಆಗ ನಮ್ಮವರಿಂದಲೇ ಆದ ಮೋಸದಿಂದ ರಾಯಣ್ಣ ಮತ್ತು ಆತನ ಸಹಚರರನ್ನು ಬ್ರಿಟಿಷರು ಸೆರೆ ಹಿಡಿದು ಜೈಲಿಗಟ್ಟುತ್ತಾರೆ. ಕೊನೆಗೆ ಡಿಸೆಂಬರ್ 30, 1830ರಂದು ರಾಯಣ್ಣ ಸೇರಿದಂತೆ 7 ಜನರಿಗೆ ಗಲ್ಲು ಶಿಕ್ಷೆ, ಇನ್ನುಳಿದ 6 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಆಗಿನ ದಕ್ಷಿಣ ಮರಾಠಾ ಪ್ರದೇಶ ಮತ್ತು ದಕ್ಷಿಣ ಭಾರತದ ಕಮಿಷನರ್ ಆಗಿದ್ದ ಜೆ.ವಿ.ಅಂಡರಸನ್ ಆದೇಶ ಮಾಡುತ್ತಾರೆ. ಆ ಪ್ರಕಾರ ಇಂದಿನ ಖಾನಾಪುರ ತಾಲೂಕಿನ ನಂದಗಡದಲ್ಲಿ ಜನವರಿ 26, 1831ರಂದು 7 ಮಂದಿಯನ್ನು ಗಲ್ಲಿಗೇರಿಸಲಾಗುತ್ತದೆ. ಆ ಕರಾಳ ಘಟನೆಗೆ ಈಗಲೂ ಆ ಜಾಗದಲ್ಲಿ ಆಲದ ಮರ ಸಾಕ್ಷಿ ಆಗಿ ನಿಂತಿದೆ.