ಬೆಂಗಳೂರು: ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಬಳಿಕ ಕೃತ್ಯ ಮರೆ ಮಾಚಲು ವಾಟರ್ ಹೀಟರ್ನಿಂದ ಕರೆಂಟ್ ಹೊಡೆದು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ ಪತಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹತ್ಯೆಗೊಳಗಾದ ರೇಷ್ಮಾ (32). ಹತ್ಯೆ ಮಾಡಿದ ಆರೋಪದಡಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ.
ಹೆಬ್ಬಗೋಡಿಯ ಮರಗೊಂಡಹಳ್ಳಿ ನಿವಾಸಿ ರೇಷ್ಮಾ ಅವರು 15 ವರ್ಷಗಳ ಹಿಂದೆ ಸುರೇಂದರ್ ಎಂಬುವರೊಂದಿಗೆ ಮದುವೆ ಮಾಡಿಕೊಂಡಿದ್ದರು. ವಿವಾಹವಾದ ಒಂದೇ ವರ್ಷದಲ್ಲಿ ಮೊದಲ ಪತಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದ. ಈ ದಂಪತಿಗೆ 15 ವರ್ಷದ ಮಗಳಿದ್ಧಾಳೆ. 9 ತಿಂಗಳ ಹಿಂದೆ ರೇಷ್ಮಾಗೆ ಇನ್ಸ್ಟಾಗ್ರಾಮ್ ಮುಖಾಂತರ ಬಳ್ಳಾರಿಯ ಹೂವಿನ ಹಡಗಲಿ ಮೂಲದ ಪ್ರಶಾಂತ್ ಎಂಬಾತನ ಪರಿಚಯವಾಗಿದೆ. ಕಾಲಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಾಡಿಕೊಂಡಿದ್ದರು. ಐಟಿಐ ವ್ಯಾಸಂಗ ಮಾಡಿದ್ದ ಪ್ರಶಾಂತ್ ಹೆಬ್ಬಗೋಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದುವೆ ಬಳಿಕ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಕೆಲ ತಿಂಗಳಿಂದ ಪತ್ನಿಗೆ ಬೇರೆ ಸಂಬಂಧ ಇರುವುದಾಗಿ ಶಂಕಿಸಿ ಪ್ರಶಾಂತ್ ಗಲಾಟೆ ಮಾಡುತ್ತಿದ್ದ. ಅ.15ರಂದು ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಎಂದಿನಂತೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಗಳು ಬಾತ್ರೂಮ್ನಲ್ಲಿ ಬಾಗಿಲು ಚಿಲಕ ಹಾಕಿರುವುದನ್ನು ಗಮನಿಸಿ ತೆಗೆದು ಒಳ ಹೋದಾಗ ರೇಷ್ಮಾ ಅಸ್ವಸ್ಥತೆಯಿಂದ ಬಿದ್ದಿರುವುದನ್ನು ನೋಡಿ ಆಂತಕಗೊಂಡು ದೊಡ್ಡಮ್ಮ ರೇಣುಕಾಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.