ಹಾಸನ: ಈ ವರ್ಷ ಹಾಸನಾಂಬೆ ದೇವಾಲಯಕ್ಕೆ ಒಂದು ವಾರದಲ್ಲಿ 13.89 ಲಕ್ಷ ಭಕ್ತರು ಹರಿದುಬಂದಿದ್ದು, ಶುಕ್ರವಾರ ಒಂದೇ ದಿನ 3.10ಲಕ್ಷ ಮಂದಿ ದೇವಿಯ ದರ್ಶನ ಪಡೆಯುವ ಮೂಲಕ ಹಾಸನಾಂಬೆ ಹೊಸ ದಾಖಲೆ ಬರೆದಿದ್ದಾಳೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಅಂತೆಯೇ ಅಕ್ಟೋಬರ್ 10 ರಿಂದ 16 ರವರೆಗೆ 13.89 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ.
ಗುರುವಾರ ಒಂದೇ ದಿನ 2.58 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದರೆ, ಶುಕ್ರವಾರ ಈ ಸಂಖ್ಯೆ 3 ಲಕ್ಷ ದಾಟಿದೆ. ಬೆಳಗ್ಗೆಯಿಂದಲೇ ಕಿಲೋ ಮೀಟರ್ ಗಟ್ಟಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದಾರೆ. 1000 ಮುಖಬೆಲೆಯ ಟಿಕೆಟ್ ಖರೀದಿಸಿರುವವರ ಸಂಖ್ಯೆ 30 ಸಾವಿರಕ್ಕೂ ಹೆಚ್ಚಾಗಿದ್ದು, 300 ರೂ. ಟಿಕೆಟ್ ಬರೋಬ್ಬರಿ 70 ಸಾವಿರ ಮಾರಾಟವಾಗಿದೆ. ಇನ್ನು ಧರ್ಮದರ್ಶನದಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನಸಂದಣಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಟ್ಟಿತು.
ಆಶ್ವಿಜ ಮಾಸದ ಎರಡನೇ ಗುರುವಾರ ಬಲಿಪಾಡ್ಯಮಿ ಮರುದಿನದವರೆಗೆ ಮಾತ್ರವೇ ಗರ್ಭಗುಡಿಯ ಬಾಗಿಲು ತೆರೆಯುವ ಪರಂಪರೆಯ ಹಿನ್ನೆಲೆಯಲ್ಲಿ, ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ ಹೊರರಾಜ್ಯ ಮತ್ತು ವಿದೇಶಗಳಿಂದಲೂ ಭಕ್ತರ ಪ್ರವಾಹ ಹರಿದುಬರುತ್ತಿದೆ. ಭಕ್ತಿಯ ಉತ್ಸಾಹದ ಮಧ್ಯೆ, ಧರ್ಮದರ್ಶನ ಸಾಲುಗಳಲ್ಲಿ ಎಂಟು ಗಂಟೆಗೂ ಹೆಚ್ಚು ಕಾಲ, ತಾಯಿಯ ದರ್ಶನಕ್ಕಾಗಿ ತಾಳ್ಮೆಯಿಂದ ಕಾದು ನಿಂತಿರುವುದು ಭಕ್ತಿ, ಶ್ರದ್ಧೆಯ ಅಪೂರ್ವ ನಿದರ್ಶನವಾಗಿದೆ.
ಹಾಸನಾಂಬೆ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಡಳಿತದ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಭಕ್ತರಿಗಾಗಿ ಅಳವಡಿಸಿದ್ದ 100ಕ್ಕೂ ಹೆಚ್ಚು ಶೌಚಾಲಯಗಳ ಕೊರತೆಯಾದ ಹಿನ್ನೆಲೆಯಲ್ಲಿ ಇನ್ನೂ 100 ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಸಂಸದ ಶ್ರೇಯಸ್ ಪಟೇಲ್ ಪರಿಶೀಲಿಸಿದರು.
ಇತಹಾಸ ಬರೆದ ಹಾಸನಾಂಬೆ: ಶುಕ್ರವಾರ 3.10 ಲಕ್ಷ ಭಕ್ತರು ದರ್ಶನ ಪಡೆಯುವ ಮೂಲಕ ಹಾಸನಾಂಬ ದೇವಿ ಹೊಸ ಇತಿಹಾಸ ಬರೆದಿದ್ದಾಳೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
Laxmi News 24×7