ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದೀಪಾವಳಿ ಅಮಾವಾಸ್ಯೆವರೆಗೆ ಶುಕ್ರವಾರ, ರವಿವಾರ ಹಾಗೂ ಮಂಗಳವಾರ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಶೀಗಿ ಹುಣ್ಣಿಮೆಯ ಪ್ರಯುಕ್ತ ಅವಳಿ ನಗರದಿಂದ ಸವದತ್ತಿಯ ರೇಣುಕಾದೇವಿ ದರ್ಶನಕ್ಕೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದ್ದ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಒಂದೇ ದಿನ ಹುಬ್ಬಳ್ಳಿಯಿಂದ 42 ಬಸ್ಸುಗಳಲ್ಲಿ 82 ಸರತಿಗಳಲ್ಲಿ 6350 ಭಕ್ತಾದಿಗಳು ಹಾಗೂ ನವಲಗುಂದದಿಂದ ಬಸ್ಗಳಲ್ಲಿ 60 ಸರತಿಗಳಲ್ಲಿ 4300ಕ್ಕೂ ಹೆಚ್ಚು ಭಕ್ತಾದಿಗಳು ಯಲ್ಲಮ್ಮನಗುಡ್ಡಕ್ಕೆ ಹೋಗಿ ರೇಣುಕಾ ದೇವಿಯ ದರ್ಶನ ಪಡೆದು ಬಂದಿದ್ದಾರೆ. ಈ ವಿಶೇಷ ಬಸ್ ಗಳಲ್ಲಿ ನೇರವಾಗಿ ಯಲ್ಕಮ್ಮನ ಗುಡ್ಡಕ್ಕೆ ಹೋಗಿಬರಲು ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾವಾಗಿದೆ.
ಆದ್ದರಿಂದ ಬರುವ ಅಮಾವಾಸ್ಯೆವರೆಗೆ ಪ್ರತಿ ಶುಕ್ರವಾರ, ರವಿವಾರ ಹಾಗೂ ಮಂಗಳವಾರಂದು ಈ ವಿಶೇಷ ಬಸ್ ಗಳ ಸೌಲಭ್ಯವನ್ನು ಮಾಡುವಂತೆ ಬೇಡಿಕೆ ಬಂದಿರುತ್ತದೆ ಅದರಂತೆ ದೀಪಾವಳಿ ಅಮಾವಾಸ್ಯೆವರೆಗೆ ಪ್ರತಿ ಶುಕ್ರವಾರ, ರವಿವಾರ ಹಾಗೂ ಮಂಗಳವಾರದಂದು ಅಂದರೆ ಅಕ್ಟೋಬರ್ 10,12,14,17,19ರಂದು ವಿಶೇಷ ಬಸ್ ಗಳ ವ್ಯವಸ್ಥೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.