ಹಾವೇರಿ: “ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಒಗ್ಗಟ್ಟಿನ ಹೋರಾಟದ ಅವಶ್ಯಕತೆ ಇದೆ” ಎಂದು 108 ಶ್ರೀ ವಿದಿತ ಮುನಿ ಮಹಾರಾಜ್ ಹೇಳಿದರು.
ಹಾವೇರಿಯ ಜೈನ ಬಸದಿಯಲ್ಲಿ ಇಂದು ನಡೆದ 7ನೇ ದೀಕ್ಷಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು.
“ಭಾರತದಲ್ಲಿ ಎಲ್ಲಾ ವರ್ಗದ ಜನರಿದ್ದಾರೆ. ಹಿಂದೂ ಎಂದರೆ ಹಿಂಸೆಯಿಂದ ದೂರ ಉಳಿದವನು ಎಂದರ್ಥ. ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ನಮ್ಮ ಪೂರ್ವಜರಾದ ರಾಮ, ಬುದ್ಧ, ಬಸವ, ಹನುಮ, ಮಹಾವೀರರು ಹೇಳಿದ ಧರ್ಮ ಬೋಧನೆಯಂತೆ ನಡೆದುಕೊಳ್ಳಬೇಕು” ಎಂದು ಕರೆ ಕೊಟ್ಟರು.
“ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ ನಾಶ ಮಾಡುವುದಕ್ಕೆ ವಿದೇಶಿಗರು ಷಡ್ಯಂತ್ರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯರು ಜಾಗೃತರಾಗಬೇಕು. ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ” ಎಂದರು.
“ಮುಂದಿನ ಪೀಳಿಗೆಯ ಅಳಿವು-ಉಳಿವು ಇಲ್ಲಿರುವ ಪ್ರತಿಯೊಬ್ಬ ಪ್ರಜೆಯ ಕೈಯಲ್ಲಿದೆ” ಎಂದು ಮುನಿಗಳು ಹೇಳಿದರು.
ಇನ್ನು ಇತ್ತೀಚಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡುತ್ತಾ, ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿರುವುದನ್ನು ನೀವು ಗಮನಿಸಿದ್ದೀರಿ. ನನಗೆ ಬಹಳ ಆಶ್ಚರ್ಯ. ಇಷ್ಟು ದೊಡ್ಡ ನೋವು ನಾವು ಯಾರಿಗೂ ಮಾಡಿಲ್ಲ, ಯಾವ ತಪ್ಪೂ ಮಾಡಲಿಲ್ಲ. ಜನರು, ಪತ್ರಿಕಾ ಮಾಧ್ಯಮದವರು ‘ನಿಮ್ಮ ಮೇಲೆ ಯಾಕೆ ಇಷ್ಟು ಮಾತುಗಳು ಬರುತ್ತಿವೆ’ ಎಂದು ಕೇಳುತ್ತಾರೆ. ನನಗೆ ಬೇರೆ ಎಲ್ಲಾ ಗೊತ್ತಾಗಿದೆ. ಆದರೆ ಯಾಕೆ ನಮ್ಮ ಮೇಲೆ ಇಷ್ಟು ದ್ವೇಷ ಎಂದು ಗೊತ್ತಾಗಬೇಕಿದೆ” ಎಂದು ಹೇಳಿದ್ದರು.
“ಈಗ ನನ್ನ ಮನಸ್ಸು ಸ್ವಲ್ಪ ಹಗುರವಾಗಿದೆ. ನಾನು ಮೊದಲೇ ಹೇಳಿದ್ದೆ, ಎತ್ತರದಲ್ಲಿ ನೀರು ನಿಲ್ಲುವುದಿಲ್ಲ. ನೀರೆಲ್ಲಾ ಕೆಳಗೆ ಹರಿಯಲೇಬೇಕು. ಅದರಂತೆ ಎತ್ತರದ ಬೆಟ್ಟದ ಮೇಲಿಂದ ನೀರು ಕೆಳಗೆ ಹರಿದಿದೆ. ಯಾರೆಲ್ಲಾ ದೃಢವಾದ ನಂಬಿಕೆ ನಮ್ಮ ಮೇಲೆ ಇಟ್ಟು ಧರ್ಮಸ್ಥಳದಿಂದ ಯಾವುದೇ ಅಪಪ್ರಚಾರ ನಡೆದಿಲ್ಲ ಎಂದು ಬೆಂಬಲ ನೀಡಿದ್ದೀರೋ ನಿಮಗೆಲ್ಲ ನಾನು ಆಭಾರಿ. ಕ್ಷೇತ್ರದ ಮಂಜುನಾಥ ಸ್ವಾಮಿ ನಿಮಗೆಲ್ಲರಿಗೂ ಒಳ್ಳೇಯದನ್ನೇ ಮಾಡುತ್ತಾನೆ” ಎಂದು ಹರಸಿದ್ದರು.
“ಊರವರ, ಕ್ಷೇತ್ರದ ಭಕ್ತರೆಲ್ಲರ ಪ್ರೀತಿ ವಿಶ್ವಾಸಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದರಿಂದಾಗಿ ಇನ್ನೂ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಮಾಡಬೇಕೆಂಬ ಚೈತನ್ಯ ಮೂಡುತ್ತಿದೆ. ಕೆಲವು ಸಮಯಗಳಿಂದ ಕ್ಷೇತ್ರದ ಮೇಲೆ ಸತತವಾಗಿ ಆರೋಪಗಳು, ದ್ವೇಷಗಳು ಬರತೊಡಗಿತು. ಅದಕ್ಕೆ ಕಾರಣವೇನು ಎಂದು ನನಗೆ ಇದುವರೆಗೂ ತಿಳಿದಿಲ್ಲ. ಈಗ ಸರಕಾರ ನಡೆಸುತ್ತಿರುವ ತನಿಖೆಯಲ್ಲಿ ಸತ್ಯಗಳು ಹೊರ ಬರುತ್ತಿವೆ. ನಮ್ಮಿಂದ ಯಾವ ತಪ್ಪುಗಳು ನಡೆದಿಲ್ಲ ಎಂದು ತಿಳಿಯುತ್ತಿದೆ” ಎಂದು ಹೆಗ್ಗಡೆ ಅವರು ಹೇಳಿದ್ದರು.
Laxmi News 24×7