ಬೆಂಗಳೂರು/ಮೈಸೂರು: ಅಕ್ಟೋಬರ್ 2ರಂದು ದೇಶಾದ್ಯಂತ ಮಹಾತ್ಮ ಗಾಂಧಿ ಅವರ ಜಯಂತಿ ಆಚರಿಸಲಾಗುತ್ತದೆ. ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಅವರ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಇಂದು ಮೈಸೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಸಿಎಂ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಇಂದು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕೂಡಾ ಹೌದು. ಅವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ ಎಂದು ಸ್ಮರಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಷ್ಟಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಗಾಂಧೀಜಿಯವರ ಮಹಾನ್ ಸ್ವರೂಪ ನಮ್ಮ ದೇಶಕ್ಕೆ ಬೆಳಕಾಗಿದೆ. ನಾವೆಲ್ಲರೂ ಗಾಂಧೀಜಿಯವರನ್ನು ಸ್ಮರಿಸೋಣ, ಅವರ ಆಶಯಗಳನ್ನು ಉಳಿಸೋಣ ಎಂದರು.
ಇಂದು ಪವಿತ್ರ ದಿನ. ಇದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ. ಮತ್ತು ವಿಜಯದಶಮಿಯ ಶುಭ ದಿನ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಜನ್ಮದಿನ. ದುರ್ಗೆ ಎಂದರೆ ಶಕ್ತಿ, ಗಾಂಧಿ ಎಂದರೆ ಶಾಂತಿ. ಎಲ್ಲರಿಗೂ ಶಕ್ತಿ ಮತ್ತು ಶಾಂತಿ ಸಿಗಲಿ ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಾರ್ಥಿಸುತ್ತೇನೆ. ಗಾಂಧೀಜಿಯವರ ತತ್ವ, ಆದರ್ಶಗಳ ಬಗ್ಗೆ ಯುವಕರಿಗೆ ತಿಳಿಸಲು ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಮ್ಮ ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ‘ಗಾಂಧಿ ಜ್ಯೋತಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೆ ಕಳುಹಿಸಬೇಕೆಂದು ಯೋಜನೆ ರೂಪಿಸಿದ್ದೇವೆ ಎಂದರು.
ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಸಹ ಇದ್ದು, ಅವರು ಒಬ್ಬ ಧೀಮಂತ ನಾಯಕರು. ಅವರು ಸರಳತೆ ನಮಗೆ ಎಂದೆಂದಿಗೂ ಸ್ಫೂರ್ತಿ. ಮಹಾತ್ಮ ಗಾಂಧೀಜಿಯವರು ನೂರು ವರ್ಷದ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ರೆಸಲ್ಯೂಷನ್ ಮಾಡಿದ ಸಭೆ ಮತ್ತು ನಾವು ಈಗ ನಡೆಸಿದ ಸಭೆ, ಇವೆರಡನ್ನೂ ಸೇರಿಸಿ ನನ್ನ ಅನುಭವದ ಬಗ್ಗೆ ನಾನು ಒಂದು ಪುಸ್ತಕವನ್ನು ಸಹ ಬರೆದಿದ್ದೇನೆ. ಅದನ್ನು ಸಹ ಬಿಡುಗೊಡೆಗೊಳಿಸುತ್ತೇನೆ ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.