ದಾವಣಗೆರೆ : ಭಾರತ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಬಿಡುಗಡೆ ಮಾಡಬೇಕು ಎಂದು ಸ್ವಾತಂತ್ರ್ಯ ಹೋರಾಟಕ್ಕೆ ಧುಮ್ಮಿಕ್ಕಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು. ಈ ಸಂಬಂಧ ಅವರು 1934ರಲ್ಲಿ ದಾವಣಗೆರೆ ಜಿಲ್ಲೆಯ ಎಕೆ ಹಟ್ಟಿಗೆ ಭೇಟಿ ನೀಡಿದ್ದರು. ಅಲ್ಲದೇ, ಗಾಂಧಿಜೀ ಅವರು ಹರಿಜನರೊಂದಿಗೆ ಸಂವಾದ ನಡೆಸಿದ್ದಕ್ಕಾಗಿ ಇಲ್ಲಿಗೆ ಗಾಂಧಿನಗರ ಎಂದು ನಾಮಕರಣ ಕೂಡಾ ಮಾಡಲಾಗಿದೆ.
ಎಕೆ ಹಟ್ಟಿಯಿಂದ ಗಾಂಧಿ ನಗರ ಎಂದು ನಾಮಕರಣ: ಈ ಸಂವಾದದಲ್ಲಿ ಕರನಹಳ್ಳಿ ಶಿಡ್ಲಪ್ಪ, ಮೈಲಪ್ಪ, ಹಾಲಪ್ಪ, ರಾಮಜ್ಜ, ಭೈರಜ್ಜ ಇವರೆಲ್ಲರೂ ಕೂಡ ಬಾಪು ಜೊತೆ ಸಂವಾದ ನಡೆಸಿದ್ದರು. ಬಳಿಕ ಬಾಪು ಎಕೆ ಕಾಲೋನಿಯ ಹೊರಟ್ಟಿ ದುರ್ಗಾಂಭಿಕ ದೇವಿ ದೇವಾಲಯದಲ್ಲಿ ಸಭೆ ಮಾಡಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಅಲ್ಲದೇ, ಸಂವಾದದ ಬಳಿಕ ಹರಿ ಜನರು, ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಮಹಾತ್ಮ ಗಾಂಧಿ ಅವರ ಮಹದಾಸೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿದ್ದರು.ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ಜನರನ್ನು ಪಾಲ್ಗೊಳ್ಳುವಂತೆ ಹಾಗೂ ಜಾಗೃತಗೊಳಿಸಲು ದೇಶಾದ್ಯಂತ ಪ್ರವಾಸ ಕೈಗೊಂಡ ವೇಳೆ ಅವರು ಇಲ್ಲಿಗೆ ಬಂದಿದ್ದರು. ಆಗ ಇಲ್ಲಿ 50 ಎಕರೆ ರುದ್ರಭೂಮಿ ಜಾಗವನ್ನು ನೋಡಿದ್ದ ಗಾಂಧೀಜಿ ಅವರು ಆ ಜಾಗವನ್ನು ರುದ್ರ ಭೂಮಿಗೆ ಬರೆಯಿರಿ ಎಂದು ನಗರಸಭೆ ಅಧ್ಯಕ್ಷರಾಗಿದ್ದ ಚನ್ನಗಿರಿ ರಂಗಪ್ಪಗೆ ಆದೇಶಿಸಿದ್ದರು. ಅದರಂತೆ ಇಂದಿಗೂ ಆ ರುದ್ರಭೂಮಿಯನ್ನು ಇಲ್ಲಿ ನೋಡಬಹುದಾಗಿದೆ.ದಲಿತ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಹಾಸ್ಟೆಲ್ ಕುರಿತು ಚರ್ಚಿಸಿದ್ದ ಗಾಂಧೀಜಿ: ದಲಿತ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಹಾಸ್ಟೆಲ್ ಕುರಿತು ಗಾಂಧೀಜಿಯವರು ಚರ್ಚಿಸಿದ್ದರು. ಶಿಕ್ಷಣದ ಬಗ್ಗೆ ಚರ್ಚಿಸಲು ಹರಿಜನ ಮುಖಂಡರೊಂದಿಗೆ ಹೊರಟ್ಟಿ ದುರ್ಗಾಂಭಿಕ ದೇವಿಯ ದೇವಾಲಯದಲ್ಲಿ ಸಭೆ ನಡೆಸಿದ್ದರು. ಮಹಾರಾಷ್ಟ್ರಕ್ಕೆ ತೆರಳಬೇಕಾಗಿದ್ದರೂ ಕೂಡ ಅಂದೇ ದಾವಣಗೆರೆಯಾದ್ಯಂತ ಸಂಚರಿಸಿದ ಬಾಪು, ಪಿ.ಜೆ. ಬಡಾವಣೆಯಲ್ಲಿ ಜಾಗ ಗುರುತಿಸಿ ತರಾತುರಿಯಲ್ಲಿ (1934ರ ಮಾರ್ಚ್ 02)ರ ರಾತ್ರಿ 8 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿಯೇ ವಾಪಸ್ ಆಗಿದ್ದರು.
Laxmi News 24×7