ಬೆಂಗಳೂರು: ಜೈನ ಮಂದಿರಗಳ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ವೇತನ ನಿಗದಿ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ರಾಜ್ಯದ 1,043 ಜೈನ ಮಂದಿರಗಳ ಪ್ರಧಾನ ಅರ್ಚಕರಿಗೆ ತಲಾ 6 ಸಾವಿರ ರೂ., ಸಹಾಯಕ ಅರ್ಚಕರುಗಳಿಗೆ 5 ಸಾವಿರ ರೂ. ವೇತನ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ಇದೇ ಮೊದಲ ಬಾರಿಗೆ ಜೈನ ಮಂದಿರಗಳ ಅರ್ಚಕರಿಗೆ ವೇತನ ನಿಗದಿ ಸಂಬಂಧ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ವೇತನಕ್ಕಾಗಿ ಇದುವರೆಗೂ ಜಿಲ್ಲೆಗಳಿಂದ 1043 ಪ್ರಸ್ತಾವನೆ ಬಂದಿದ್ದು, ಸಚಿವ ಜಮೀರ್ ಅಹಮದ್ ಖಾನ್ ಅವರು ಎಲ್ಲ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿ ಅಭಿವೃದ್ಧಿಗೆ 1 ಕೋಟಿ ರೂ. ಬಿಡುಗಡೆ ಮಾಡಲು ಸಚಿವರು ಆದೇಶ ಹೊರಡಿಸಿದರು.
ಹಲವು ಬಾರಿ ಜೈನ ದೇವಸ್ಥಾನದ ಅರ್ಚಕರು ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಮುಜರಾಯಿ ದೇವಾಲಯಗಳ ಅರ್ಚಕರಿಗೆ ನೀಡುವಂತೆ ತಮಗೂ ವೇತನ ನೀಡುವಂತೆ ಮನವಿ ಮಾಡಿದ್ದರು. ಜೈನ ದೇವಾಲಯದ ಅರ್ಚಕರು 160-200 ರೂ. ವೇತನ ಪಡೆಯುತ್ತಿದ್ದರು.