ಶಿವಮೊಗ್ಗ: ಹೆಬ್ಬಾವುಗಳ ಬಾಯಿಗೆ ಗಮ್ ಟೇಪ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಜಿಲ್ಲೆಯ ಮಳಲಿಕೊಪ್ಪದಲ್ಲಿ ನಡೆದಿದೆ. ಇಲ್ಲಿನ ಇರ್ಫಾನ್ ಹಾಗೂ ಇತರ ಯುವಕರ ಗುಂಪು ಹೆಬ್ಬಾವುಗಳನ್ನು ಹಿಡಿದು ಅವುಗಳನ್ನು ಚೀಲದಲ್ಲಿ ಹಾಕಿಕೊಂಡು ಬಂದು ರಸ್ತೆಯಲ್ಲಿ ಬಾಲ ಹಿಡಿದು ಎಳೆದಾಡಿದ್ದಾರೆ ಹಾಗೂ ಅವುಗಳ ಬಾಯಿಗೆ ಪ್ಲಾಸ್ಟಿಕ್ ಗಮ್ ಟೇಪ್ ಹಾಕುವ ಮೂಲಕ ಅವುಗಳಿಗೆ ಹಿಂಸೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉಂಬ್ಳಬೈಲು ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೊಹಮ್ಮದ್ ಇರ್ಫಾನ್ ಪರಾರಿಯಾಗಿದ್ದಾನೆ. ಇದೀಗ ಅರಣ್ಯಾಧಿಕಾರಿಗಳು ಇರ್ಫಾನ್ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇರ್ಫಾನ್ ಮನೆಯಲ್ಲಿದ್ದ ಹೆಬ್ಬಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹನುಮಂತಪ್ಪನವರು ಮಾತನಾಡಿ, ‘ಭದ್ರಾವತಿ ವಿಭಾಗದ ಉಂಬ್ಳಬೈಲು ಅರಣ್ಯ ವಲಯದ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದಲ್ಲಿ ಮೊಹಮ್ಮದ್ ಇರ್ಫಾನ್ ಎಂಬಾತ ಮೂರು ಹೆಬ್ಬಾವು ಹಾಗೂ ಎರಡು ನಾಗರಹಾವುಗಳನ್ನು ಹಿಡಿದು ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ 1/2026-26 ರಂತೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಆರೋಪಿ ಇರ್ಫಾನ್ ಹಾವು ಕಂಡು ಬಂದಾಗ ಹಿಡಿಯುವ ವೃತ್ತಿ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದಾರೆ. ಈತನ ಮನೆ ಮೇಲೆ ದಾಳಿ ನಡೆಸಿ, ಹಾವುಗಳನ್ನು ರಕ್ಷಿಸಿ, ಅದನ್ನು ಕಾಡಿಗೆ ಬಿಡಲಾಗಿದೆ. ಆರೋಪಿಯನ್ನು ಹುಡುಕಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ಸೆಕ್ಷನ್ 9ರಡಿ ಪ್ರಕರಣ ದಾಖಲಿಸಲಾಗಿದ್ದು, ಇದು ವನ್ಯಜೀವಿ ಬೇಟೆಯ ಕಾಯ್ದೆಯಾಗಿದೆ. ಇದರಲ್ಲಿ ಪ್ರಕರಣ ದಾಖಲಾದರೆ, ಆರೋಪಿಗೆ ಕನಿಷ್ಠ ಮೂರು ವರ್ಷ ಶಿಕ್ಷೆಯಾಗಲಿದೆ.