ಬೆಂಗಳೂರು : ವರದಕ್ಷಿಣೆ ಕಿರುಕುಳ ಕುರಿತಂತೆ ಬೆಂಕಿ ಹಚ್ಚಿಕೊಂಡು ಮೃತಪಡುವುದಕ್ಕೂ ಮುನ್ನ ನೀಡುವ ಮರಣ ಪೂರ್ವ ಹೇಳಿಕೆ ಆಧರಿಸಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮಂಜು ಅಲಿಯಾಸ್ ಮಂಜುನಾಥ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಘಟನೆ ಸಂಬಂಧ ಸಾಕ್ಷ್ಯಾಧಾರಗಳಲ್ಲಿ ಗೊಂದಲವಿದ್ದರೂ, ಮರಣ ಪೂರ್ವ ಹೇಳಿಕೆ ಆಧರಿಸಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರರಕಣರದಲ್ಲಿ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಮೃತರು ರೂಮಿನಲ್ಲಿ ಮಲಗಿದ್ದರು ಎಂಬುದಾಗಿ ತನಿಖೆಯಲ್ಲಿ ಹೇಳಲಾಗಿದೆ. ಆದರೆ, ಮಹಜರ್ನಲ್ಲಿ ಸ್ನಾನದ ಮನೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಜತೆಗೆ, ಮಲಗಿರುವಾಗ ಕೋಣೆಯಲ್ಲಿ ಘಟನೆ ನಡೆದಿದ್ದರೆ ಅಲ್ಲಿದ್ದ ಇತರ ಬಟ್ಟೆಗಳು ಬೆಂಕಿಗೆ ಆಹುತಿಯಾಗಬೇಕಾಗಿತ್ತು. ಈ ಬಗ್ಗೆ ತನಿಖಾಧಿಕಾರಿಗಳು ಯಾವುದೇ ಸಾಕ್ಷ್ಯಾದಾರಗಳನ್ನು ಒದಗಿಸಿಲ್ಲ. ಆರೋಪಿ ಮತ್ತವರು ಪೋಷಕರು ಸ್ವತಃ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಮೇಲ್ಮನವಿದಾರರ ವಿರುದ್ಧ ಮೃತರು ಯಾವುದೇ ಹೇಳಿಕೆ ದಾಖಲಿಸಿಲ್ಲ. ಅಲ್ಲದೇ, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಮೇಲ್ಮನವಿದಾರ ಸ್ಥಳದಲ್ಲಿರಲಿಲ್ಲ ಎಂಬುದಾಗಿ ನೆರೆಹೊರೆಯರು ತಿಳಿಸಿದ್ದಾರೆ. ಜತೆಗೆ, ಮರಣ ಪೂರ್ವ ಹೇಳಿಕೆ ದಾಖಲಾದ ಎರಡು ದಿನಗಳ ಬಳಿಕ ಎಫ್ಐಆರ್ ದಾಖಲಿಸಲಾಗಿದೆ. ಆ ಮೃತ ಸಂತ್ರಸ್ತೆ ಮರಣ ಪೂರ್ವ ಹೇಳಿಕೆ ಮತ್ತು ತನಿಖೆಯ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದ್ದು, ಗಂಭೀರ ಅನುಮಾನವನ್ನು ಹುಟ್ಟುಹಾಕುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ ಮೇಲ್ಮನವಿ ಪುರಸ್ಕರಿಸುತ್ತಿದ್ದು, ಆರೋಪಿಗೆ ವಿಧಿಸಿರುವ ಶಿಕ್ಷೆ ರದ್ದುಗೊಳಿಸಿ, ಆರೋಪ ಮುಕ್ತರನ್ನಾಗಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.