ಬಳ್ಳಾರಿ: ಜನನ ಪ್ರಮಾಣಪತ್ರ ಕೊಡಿಸುವುದಾಗಿ ಒಂದೂವರೆ ತಿಂಗಳ ಮಗುವನ್ನೇ ಮಹಿಳೆ ಕಿಡ್ನಾಪ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಒಂದೇ ದಿನದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಶಮೀಮ್, ಇಸ್ಮಾಯಿಲ್, ಬಾಷಾ ಹಾಗು ಬಸವರಾಜ್ ಬಂಧಿತ ಆರೋಪಿಗಳು.
ಘಟನೆಯ ವಿವರ: ತನ್ನ ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ತಾಯಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಜನನ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿದ ಮಹಿಳೆಯೊಬ್ಬಳು, ಆಕೆಯನ್ನು ಪಾಲಿಕೆ ಕಚೇರಿಗೆ ಕರೆದುಕೊಂಡು ಬಂದು ಮಗುವನ್ನು ಕಿಡ್ನಾಪ್ ಮಾಡಿದ್ದಾಳೆ. ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಆದ ಮಗುವನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ.
ಮಕ್ಕಳಿಲ್ಲದ ಪೋಷಕರಿಗೆ ಮಗು ಕದ್ದು ಮಾರಾಟ: ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದ ಶ್ರೀದೇವಿ ಎಂಬಾಕೆ ಜುಲೈ 28ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಜನನ ಪ್ರಮಾಣ ಪತ್ರಕ್ಕಾಗಿ ಕಳೆದ ಶುಕ್ರವಾರ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಗ ಶಮೀಮ್ ಎಂಬ ಮಹಿಳೆಯ ಪರಿಚಯವಾಗಿ ಜನನ ಪ್ರಮಾಣಪತ್ರ ಮಹಾನಗರ ಪಾಲಿಕೆಯಲ್ಲಿ ನೀಡುತ್ತಾರೆ ಎಂದು ಹೇಳಿ, ಶ್ರೀದೇವಿ ಮತ್ತವರ ಅವರ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ.
ಪಾಲಿಕೆಯಲ್ಲಿ ಶ್ರೀದೇವಿ ಮತ್ತವರ ತಾಯಿ ಶೌಚಕ್ಕೆ ಹೋದಾಗ ಮಗುವನ್ನು ಶಮೀಮ್ ಅವರ ಕೈಗೆ ಕೊಟ್ಟಿದ್ದಾರೆ. ಶಮೀಮ್ ಮಗು ಕದ್ದುಕೊಂಡು ಹೋಗಿದ್ದಾಳೆ. ಅದೆಷ್ಟೇ ಹುಡುಕಿದರೂ ಮಗು ಸಿಗದ ಹಿನ್ನೆಲೆಯಲ್ಲಿ ಶ್ರೀದೇವಿ ಕುಟುಂಬ ಬ್ರೂಸ್ಪೇಟೆ ಠಾಣೆಗೆ ದೂರು ನೀಡಿದ್ದರು. ಮಗು ಕದ್ದ ಕೌಲ್ಬಜಾರ ಮೂಲದ ಶಮೀಮ್ ತನ್ನ ಗಂಡ ಇಸ್ಮಾಯಿಲ್ ಮೂಲಕ ತೋರಣಗಲ್ಲಿನಲ್ಲಿ ತಾಯಿತ ಕಟ್ಟುತ್ತಿದ್ದ ಬಾಷ ಎನ್ನುವ ಮೌಲ್ವಿಗೆ ನೀಡಿದ್ದರು.
ಅಲ್ಲಿ ಮೂವರು ಸೇರಿ ಮಗು ಇಲ್ಲದ ಬಸವರಾಜ್ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದಾರೆ. ತಮಗೆ ಮಗುವಿಲ್ಲ, ಯಾರಾದರೂ ಮಗುವನ್ನು ದತ್ತು ಅಥವಾ ಮಾರಾಟ ಮಾಡುತ್ತಿದ್ದರೆ ತಿಳಿಸುವಂತೆ ಬಸವರಾಜ್ ಮೌಲ್ವಿ ಬಾಷ ಅವರಿಗೆ ತಿಳಿಸಿದ್ದನಂತೆ. ಹಣದಾಸೆಗೆ ಮೌಲ್ವಿ ತಮ್ಮ ಸಂಬಂಧಿಕರ ಮೂಲಕ ಮಗು ಕಳ್ಳತನ ಮಾಡಿಸಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
Laxmi News 24×7