ಹಾಸನ/ಗಂಗಾವತಿ: ವಿಚ್ಛೇದನಕ್ಕೆ ಮುಂದಾಗಿದ್ದ ಮೂರು ಜೋಡಿಗಳು ಶನಿವಾರ ನಡೆದ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ. ಜಿಲ್ಲೆಯಲ್ಲಿ 5,83,545 ಇತರೆ ಪ್ರಕರಣಗಳಲ್ಲಿ ಉಭಯ ಕಕ್ಷಿದಾರರು ಫಲಾನುಭವಿಗಳಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಒಟ್ಟು 42 ನ್ಯಾಯಾಲಯಗಳಲ್ಲಿ ಸಂಧಾನ ಪ್ರಕ್ರಿಯೆ ಜರುಗಿದ್ದು, ಉತ್ತಮ ಫಲಿತಾಂಶ ಹೊರಬಿದ್ದಿದೆ. ನ್ಯಾಯಾಲಯಗಳಲ್ಲಿ ಒಟ್ಟು 94,106 ಪ್ರಕರಣಗಳು ಬಾಕಿ ಉಳಿದಿದ್ದು, ಈ ರಾಷ್ಟ್ರೀಯ ಲೋಕ್ ಅದಾಲತ್ಗಾಗಿ 6,045 ಪ್ರಕರಣಗಳು ಹಾಗೂ 5,88,784 ವ್ಯಾಜ್ಯಪೂರ್ವ ಪ್ರಕರಣಗಳನ್ನು ಗುರುತಿಸಲಾಗಿತ್ತು ಎಂದು ವಿವರಿಸಿದ್ದಾರೆ.
ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ರಾಜಿ ಮಾಡಬಹುದಾಗಿದ್ದ ಕ್ರಿಮಿನಲ್ ಪ್ರಕರಣಗಳು 106, ಚೆಕ್ ಅಮಾನ್ಯ ಪ್ರಕರಣಗಳು 170, ಬ್ಯಾಂಕ್ ವಸೂಲಾತಿ ಪ್ರಕರಣಗಳು 90, ವಿದ್ಯುತ್ ಕಾಯ್ದೆಯ ಪ್ರಕರಣಗಳು 40, ಭೂಸ್ವಾಧೀನದ ಪ್ರಕರಣಗಳು 50, ಮೋಟಾರು ವಾಹನ ಪರಿಹಾರದ ಪ್ರಕರಣಗಳು 60, ಕೌಟುಂಬಿಕ ಪ್ರಕರಣಗಳು 13, ಇತರೆ ಸಿವಿಲ್ ಪ್ರಕರಣಗಳು 364, ಇತರೆ ಕ್ರಿಮಿನಲ್ ಪ್ರಕರಣಗಳು 2,075, ಎಲ್ಲಾ ಸೇರಿ ಒಟ್ಟು 2,925 ಪ್ರಕರಣಗಳು ಇತ್ಯರ್ಥಗೊಂಡಿವೆ.