ದಾವಣಗೆರೆ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಉಪಟಳ ಮುಂದುವರೆದಿದ್ದು, ಐವರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಮಾವಿನ ಕೋಟೆ ಮತ್ತು ಸಾಸ್ವೆಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಮಾವಿನಕೋಟೆಯಲ್ಲಿ ಓರ್ವ ವೃದ್ಧ, ಮೂವರು ಮಕ್ಕಳು ಹಾಗೂ ಸಾಸ್ವೆಹಳ್ಳಿಯ ಓರ್ವ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬೀದಿ ನಾಯಿಗಳ ಸಂಖ್ಯೆ ಮೀತಿಮೀರುತ್ತಿದೆ. ಗ್ರಾಮ ಪಂಚಾಯತ್ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸದಸ್ಯರ ವಿರುದ್ಧ ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ತ್ವರಿತ ಕ್ರಮಕ್ಕೆ ಮುಂದಾಗದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೇಬಿಸ್‌ನಿಂದ ಬಾಲಕಿ ಸಾವು: ದಾವಣಗೆರೆ ನಗರದ ಶಾಸ್ತ್ರಿ ಲೇಔಟ್‌ನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಘಟನೆ ಕೆಲ ತಿಂಗಳ ಹಿಂದೆ ನಡೆದಿತ್ತು. ಶಾಸ್ತ್ರಿ ಲೇಔಟ್ ನಿವಾಸಿ ಮೊಹಮ್ಮದ್ ಶಾಕೀರ್ ಅಲಿ ಮತ್ತು ಅತೀಹಾ ಖಾನಂ ದಂಪತಿಯ ಪುತ್ರಿ ಖದೀರಾ ಬಾನು (4) ನಾಯಿ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ಬಾಲಕಿಗೆ ಪೋಷಕರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಕೆಲ ದಿನಗಳಲ್ಲಿ ಗುಣಮುಖಳಾಗಿದ್ದ ಬಾಲಕಿ ಇದ್ದಕ್ಕಿದ್ದಂತೆ ಮತ್ತೆ ವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಷಕರು ಮತ್ತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಅಂತಿಮವಾಗಿ ಚಿಕಿತ್ಸೆ ಫಲಿಸದೆ ರೇಬಿಸ್ ಖಾಯಿಲೆ ತಗುಲಿ ಬಾಲಕಿ ಸಾವನ್ನಪ್ಪಿದಳು ಎಂದು ಪೋಷಕರು ತಿಳಿಸಿದ್ದರು.