ಬೆಂಗಳೂರು: “ನೀವು ಚಾಮುಂಡಿ ಪೂಜೆ ಮಾಡ್ತಿಲ್ಲ. ನಿಮ್ಮದು ವೋಟಿನ ಪೂಜೆ. ಬಾನು ಮುಷ್ತಾಕ್ ಅವರಿಗೆ ಆಹ್ವಾನವನ್ನು ಖಂಡಿಸ್ತೇವೆ” ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಇಮಾಮ್ ಸಾಬಿಗೂ ಗೋಕುಲಾಷ್ಠಮಿಗೂ ಏನು ಸಂಬಂಧ? ಸಿದ್ರಾಮಣ್ಣ ಏನು ಸಂಬಂಧ? ನಿಸಾರ್ ಅಹ್ಮದ್ ಉದ್ಘಾಟಿಸಿದ್ರು ಅಂದ್ರಿ. ನಾನು ಕಂದಾಯ ಸಚಿವನಾಗಿದ್ದಾಗ ಅವರಿಗೆ ಚಿಕ್ಕಬಳ್ಳಾಪುರದಲ್ಲಿ 5 ಎಕರೆ ಭೂಮಿ ಕೊಟ್ಟಿದ್ದೆ. ಜೋಗದ ಸಿರಿ ನಿತ್ಯೋತ್ಸವ ಅಂತ ಕವಿತೆ ಬರೆದಿದ್ರು. ಕರ್ನಾಟಕದ ನದಿಗಳ ಬಗ್ಗೆ ಬರೆದಿದ್ದರು. ಅವರು ನನ್ನ ಕ್ಷೇತ್ರದಲ್ಲೇ ಇದ್ದರು. ಅವರು ಯಾವತ್ತೂ ಧರ್ಮದ ವಿರುದ್ಧ ಮಾತನಾಡಿರಲಿಲ್ಲ. ಅವರಿಗೆ ಯಾಕೆ ಈ ಯಮ್ಮನನ್ನು ಹೋಲಿಕೆ ಮಾಡ್ತೀರಾ?” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯದ ಜನ ಯಾಕೆ ನಿಮ್ಮನ್ನು ಸಿಎಂ ಮಾಡಬೇಕು. ಕುರುಬರಲ್ಲಿ ಯಾರು ಸಿಗಲಿಲ್ವೇ. ಒಕ್ಕಲಿಗ, ಬ್ಯಾಕ್ ವರ್ಡ್ ಜನ ಸಿಗಲಿಲ್ಲೇ? ಉದ್ಘಾಟನೆ ಮಾಡೋಕೆ ಆಗಲಿಲ್ವಾ. ಆಪರೇಷನ್ ಸಿಂಧೂರ ಆಯ್ತಲ್ಲ. ಅವರನ್ನು ಕರೆತಂದು ಬೇಕಾದರೆ ಮಾಡಿಸಿ. ಈಯಮ್ಮ ದೇಶಕ್ಕಾಗಿ ಹೋರಾಡಲಿಲ್ಲ. ಇವರಿಗೆ ದಸರಾ ಬಗ್ಗೆ ಭಕ್ತಿಯಿಲ್ಲ. ವಿಜಯದಶಮಿ ಬಗ್ಗೆ ಇವರಿಗೆ ಭಕ್ತಿ ಇಲ್ಲ. ಇತಿಹಾಸವೇ ಈ ಯಮ್ಮನಿಗೆ ಗೊತ್ತಿಲ್ಲ. ಅಂತರವನ್ನು ಕರೆತಂದು ದ್ರೋಹ ಬಗೆಯುತ್ತಿದ್ದೀರ. ಇದು ಕಾಂಗ್ರೆಸ್ ಸರ್ಕಾರವಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ” ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸರ್ಕಾರ ಬಂದಾಗ ಧಾರ್ಮಿಕ ಶಿಷ್ಟಾಚಾರ ತರುತ್ತೇವೆ: ಚಾಮುಂಡಿ ಬೆಟ್ಟದ ಸುತ್ತ ರಾಜಕೀಯ ನಡೆದಿದೆ ಎಂಬ ಪ್ರಮೋದಾದೇವಿ ಹೇಳಿಕೆ ವಿಚಾರವಾಗಿ ಮಾತನಾಡಿ, “ಅವರು ಸರಿಯಾಗಿಯೇ ಹೇಳಿದ್ದಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಒಲೈಕೆ ಮಾಡ್ತಿದ್ದಾರೆ. ಮಿಸ್ಟರ್ ಸಿದ್ರಾಮಣ್ಣ ನಿನಗೆ ಬೇರೆ ಯಾರು ಸಿಗಲಿಲ್ವೇ? ಎಸ್ ಸಿ,ಎಸ್ಟಿ ಬೇರೆಯವರು ಸಿಗಲಿಲ್ಲ? ಟಿಪ್ಪು ಸಂತತಿ ಕರೆತಂದು ಮಾಡಬೇಕೇ? ಯಧುವೀರ್ ವಂಶವನ್ನು ಸೆರೆಯಲ್ಲಿಟ್ಟವರು. ಹಿಂದೂಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ವೇ? ಒಳ್ಳೆಯ ಕವಿಗಳು ಇರಲಿಲ್ವೇ? ಎಲ್ಲಾ ಸುತ್ತಿ ಇಲ್ಲೇ ಹಿಡಿದು ತರುತ್ತೀರಲ್ಲ. ವೋಟಿಗಾಗಿ ಈ ರೀತಿ ಮಾಡ್ತೀರಲ್ಲ. ಪಕ್ಕಾ ಹಿಂದೂ ಭಾವನೆ ಆಘಾತ ಮಾಡಿದ್ದಾರೆ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೆ. ಆಗ ನಾವು ಕಾನೂನನ್ನು ತರುತ್ತೇವೆ. ಧಾರ್ಮಿಕ ಶಿಷ್ಟಾಚಾರವನ್ನು ತರುತ್ತೇವೆ. ತರಲೇಬೇಕು ಇಲ್ಲವಾದರೆ ಕುತಂತ್ರ ಮಾಡ್ತಾರೆ” ಎಂದು ಕಿಡಿ ಕಾರಿದರು.