ಬೆಂಗಳೂರು: ಕೌಶಲ್ಯಾಧಾರಿತ ಎಇಡಿಪಿ (ಅಪ್ರೆಂಟಿಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್)ಯನ್ನು ಮುಂಬರುವ ದಿನಗಳಲ್ಲಿ ಡಿಪ್ಲೊಮಾ ಜತೆಗೆ ವಿಜ್ಞಾನ ಮತ್ತು ಕಲಾ ಪದವಿ ವಿಭಾಗಕ್ಕೂ ಪರಿಚಯಿಸುವ ಚಿಂತನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2024-25ನೇ ಸಾಲಿನಲ್ಲಿ ಕೌಶಲ್ಯಾಧಾರಿತ ಎಇಡಿಪಿ ಶೈಕ್ಷಣಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದರಡಿ ರಾಜ್ಯದ 44 ಪ್ರಥಮದರ್ಜೆ ಕಾಲೇಜುಗಳ ಸುಮಾರು 1,600 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಬಾರಿ ಮತ್ತೆ 24 ಕಾಲೇಜುಗಳ 1,682 ವಿದ್ಯಾರ್ಥಿನಿಯರು ಹಾಗೂ 1,005 ವಿದ್ಯಾರ್ಥಿಗಳು ಸೇರಿ ಪ್ರವೇಶ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಈವರೆಗೆ ಬಿಕಾಂನ ನಾಲ್ಕು ಕೋರ್ಸ್‌ಗಳಿಗೆ ಅಪ್ರೆಂಟಿಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್ ಸೀಮಿತವಾಗಿದೆ. ಮುಂಬರುವ ದಿನಗಳಲ್ಲಿ ತೆಲಂಗಾಣ ಮತ್ತು ತಮಿಳುನಾಡು ಮಾದರಿಯಲ್ಲಿ ಡಿಪ್ಲೊಮಾ, ವಿಜ್ಞಾನ ಮತ್ತು ಕಲಾ ಪದವೀಧರರಿಗೂ ಈ ಕೋರ್ಸ್ ಪರಿಚಯಿಸುವ ಯೋಚನೆ ಇದೆ ಎಂದರು.
ಬಿಕಾಂ ಲಾಜಿಸ್ಟಿಕ್, ಇ- ಕಾಮರ್ಸ್, ಬಿಕಾಂ ರಿಟೈಲ್ ಮತ್ತು ಬಿಎಫ್‌ಎಸ್‌ಐ ಕೋರ್ಸ್‌ಗಳನ್ನು ಕಳೆದ ವರ್ಷ ಆರಂಭಿಸಲಾಗಿದೆ. ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಪದವಿ ಜತೆಗೆ ಪ್ರತ್ಯೇಕ ಪಠ್ಯ ಚಟುವಟಿಕೆಗಳಲ್ಲಿ ತರಬೇತಿ ನೀಡಿ ಅಂತಿಮ ವರ್ಷದ ಐದು ಮತ್ತು ಆರನೇ ಸೆಮಿಸ್ಟರ್ ವೇಳೆಗೆ ನೇರವಾಗಿ ಕಂಪನಿಗಳಲ್ಲಿ ಉದ್ಯೋಗವಕಾಶಗಳನ್ನು ಶಿಷ್ಯವೇತನದೊಂದಿಗೆ ನೀಡಲಾಗುತ್ತಿದೆ. ಈ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿನಿಯರಿಗೆ ವಿನಾಯ್ತಿ) ಐದು ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿತ್ತು. ಈ ವರ್ಷ ಶುಲ್ಕದಿಂದ ಸಂಪೂರ್ಣ ವಿನಾಯ್ತಿ ನೀಡಿರುವುದರಿಂದ ಹೊರೆ ಆಗುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ‘ಬೋಟ್’ ಮೂಲಕ ತಲಾ ವಿದ್ಯಾರ್ಥಿಗೆ 4 ಸಾವಿರ ಶಿಷ್ಯವೇತನ ನೀಡಿದರೆ, ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನಿಂದ 3 ರಿಂದ 4 ಸಾವಿರ ರೂ. ನೀಡಲಾಗುತ್ತದೆ. ಇತರೆ ಪದವಿಗಳಿಗೆ ವಿಸ್ತರಣೆ ಮಾಡುವುದರ ಜೊತೆಗೆ ಪದವಿಗಳ ಇನ್ನಷ್ಟು ಕೋರ್ಸ್‌ಗಳನ್ನೂ ಇದಕ್ಕೆ ಸೇರಿಸಲು ಉದ್ದೇಶಿಸಲಾಗಿದೆ ಎಂದರು.