ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಮಾತ್ರ. ಆದರೆ, ಇಲ್ಲೊಬ್ಬ ಕಲಾವಿದೆ ಸೆಂಟಿಮೀಟರ್ ಅಳತೆಯ ಗಾತ್ರದ ವಿವಿಧ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಲಂಬೋದರನ ಮೂರ್ತಿಗಳು ವಿಶ್ವದಾಖಲೆಗೆ ಮನ್ನಣೆಯಾಗಿರುವುದು ಗಮನಾರ್ಹ. ಜ್ಯೋತಿ ಶಾಂತರಾಜು ಅವರು ಇಂತಹದ್ದೊಂದು ಸಾಧನೆ ಮಾಡಿದ ಕಲಾವಿದೆ.
ಶುದ್ಧ ಜೇಡಿ ಮಣ್ಣು ಮತ್ತು ಒಂದು ಸಣ್ಣ ಬ್ಲೇಡ್ ಸಿಕ್ಕರೆ ಸಾಕು ಜ್ಯೋತಿ ಅವರ ಕೈಯಲ್ಲಿ ಮಿಲಿಮೀಟರ್ (mm) ಮತ್ತು ಸೆಂಟಿಮೀಟರ್ (cm) ಅಳತೆಯ ವಿವಿಧ ಆಕಾರದ ಮನಮೋಹಕ ಗಣೇಶ ಮೂರ್ತಿಗಳು ರೂಪ ಪಡೆಯುತ್ತವೆ. ಇವರು ಮಾಡಿದ ಅತಿ ಚಿಕ್ಕ ಗಣಪನ ಮೂರ್ತಿಯ ಅಳತೆ ಕೇವಲ 1.2 ಸೆಂಟಿಮೀಟರ್ ಅನ್ನೋದು ಗಮನಾರ್ಹ. ಈ ಮೂರ್ತಿಗೆ ವಿಶ್ವದಾಖಲೆಯ ಗರಿ ಸಿಕ್ಕಿದೆ ಎಂದು ಸ್ವತಃ ಜ್ಯೋತಿ ಅವರು ಹೇಳಿಕೊಂಡಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರಾದ ಜ್ಯೋತಿ ಕಲೆಯನ್ನೇ ಉಸಿರಾಗಿಸಿಕೊಂಡವರು. ಮದುವೆಯಾಗಿ ಮೂರು ಮಕ್ಕಳ ತಾಯಿಯಾಗಿರುವ ಜ್ಯೋತಿ, ಈ ಕಲೆಯನ್ನು ಮುಂದುವರೆಸಿಕೊಂಡು ಬರುವ ಮೂಲಕ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಸದ್ಯ ಇವರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಾಗಿದ್ದು, ಮಕ್ಕಳಿಗೆ ಹಾಗೂ ಆಸಕ್ತರಿಗೆ ಕುಂಭ ಕಲೆಯ ಬಗ್ಗೆ ತರಬೇತಿ ಕೂಡ ನೀಡುತ್ತಿದ್ದಾರೆ.