Breaking News

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love

ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ ಫ್ರಾನ್ಸ್​ನಲ್ಲಿ ನಡೆಯಲಿದೆ. ಇಲ್ಲಿ ನಡೆಯುವ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ಗಾಳಿಪಟ ಆಸಕ್ತರ ತಂಡವೊಂದು ವಿಶೇಷ ಗಾಳಿಪಟವನ್ನು ತಯಾರಿಸಿ, ಸಿದ್ಧವಾಗಿದೆ.

ಫ್ರಾನ್ಸ್‌ನಲ್ಲಿ ಸೆಪ್ಟಂಬರ್ 13 ರಿಂದ ಪ್ರಪಂಚದ ಅತೀ ದೊಡ್ಡ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಗಾಳಿಪಟ ಹಾರಿಸಲು ‘ಟೀಮ್ ಮಂಗಳೂರು’ ತಂಡ ವಿಶೇಷವಾದ ಗಾಳಿಪಟವನ್ನು ತಯಾರಿಸಿದೆ. ಇದೇ ಗಾಳಿಪಟ ಫ್ರೆಂಚರ ಬಾನಂಗಳದಲ್ಲಿ ಹಾರಲಿದೆ‌.

ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡ ಈ ಹಿಂದೆ ಹತ್ತಾರು ದೇಶಗಳಲ್ಲಿ ಯಕ್ಷಗಾನ, ಕಥಕ್ಕಳಿ, ಕೋಳಿ ಅಂಕ, ಭೂತದ ಕೋಲ ಮುಂತಾದ ಭಾರತದ, ತುಳುನಾಡಿನ ಸಂಸ್ಕೃತಿ, ಕಲೆಯನ್ನು ಪ್ರತಿನಿಧಿಸುವ ಗಾಳಿಪಟಗಳನ್ನು ಹಾರಿಸಿತ್ತು. ಅದರಂತೆ ಈ ಬಾರಿ ರಥದ ವಿನ್ಯಾಸದ 18 ಅಡಿ ಎತ್ತರ 10 ಅಡಿ ಅಗಲದ ಗಾಳಿಪಟವನ್ನು ತಯಾರಿಸಿದೆ. ಈ ಗಾಳಿಪಟವು ಸೆ. 13 ರಿಂದ 9 ದಿನಗಳ ಕಾಲ ಫ್ರಾನ್ಸ್‌ನ ಬಾನಂಗಳದಲ್ಲಿ ಹಾರಾಡಿ ಭಾರತಕ್ಕೆ ಕೀರ್ತಿ ಪತಾಕೆಯಾಗಲಿದೆ.

chariot-shaped kite

ಈ ಗಾಳಿಪಟವನ್ನು ರಿಪ್‌ಸ್ಟಾಪ್ ನೈಲಾನ್ ಬಟ್ಟೆಯಲ್ಲಿ ತಯಾರಿಸಲಾಗಿದೆ. ಬಟ್ಟೆಯನ್ನು ಬೇಕಾದ ಆಕಾರಕ್ಕೆ ಕತ್ತರಿಸಿ, ಕೊಲಾಜ್ ವರ್ಕ್‌ನಲ್ಲಿ ಹೊಲಿಗೆ ಹಾಕಿ ಆರ್ಟಿಸ್ಟಿಕ್ ಮಾದರಿಯಲ್ಲಿ ರಥದ ವಿನ್ಯಾಸದಲ್ಲಿ ತಯಾರಿಸಲಾಗಿದೆ. ಈ ಗಾಳಿಪಟದ ಕಲಾವಿನ್ಯಾಸವನ್ನು ಪರಿಸರವಾದಿ ದಿನೇಶ್ ಹೊಳ್ಳ ರಚಿಸಿದ್ದಾರೆ. ವಿನ್ಯಾಸಕ್ಕೆ ತಕ್ಕಂತೆ ಗಾಳಿ ಪಟದ ಬಟ್ಟೆಯನ್ನು ಕತ್ತರಿಸುವಲ್ಲಿ ಪ್ರಾಣೇಶ್ ಕುದ್ರೋಳಿ, ಸತೀಶ್ ರಾವ್, ಅರುಣ್ ಸಹಕರಿಸಿದ್ದಾರೆ. ಬಿಡಿಬಿಡಿಯಾಗಿರುವ ಬಟ್ಟೆಯನ್ನು ಗಾಳಿಪಟದ ಮಾದರಿಯಲ್ಲಿ ಹೊಲಿಯುವ ಕಾರ್ಯವನ್ನು ಸರ್ವೇಶ್ ರಾವ್ ಮಾಡಿದ್ದಾರೆ. ಪ್ರಶಾಂತ್ ಗಾಳಿಪಟಕ್ಕೆ ಸೂತ್ರ ಹೆಣೆದಿದ್ದಾರೆ‌.

ಇದರೊಂದಿಗೆ ‘ನೀರು ಈ ಭೂಮಿಯ ಸಕಲ ಚೇತನ ಶಕ್ತಿ’ ಎಂಬ ಜೀವಜಲ ನೀರಿನ ಮಹತ್ವವನ್ನು ಸಾರುವ ಮತ್ತೊಂದು ಗಾಳಿಪಟವನ್ನು ಇವರು ತಯಾರಿಸುತ್ತಿದ್ದು, ಈ ಗಾಳಿಪಟವೂ ಫ್ರಾನ್ಸ್‌ನಲ್ಲಿ ಹಾರಲಿದೆ. ಈ ಗಾಳಿಪಟಗಳು ತುಳುನಾಡು ಮಾತ್ರವಲ್ಲ, ಇಡೀ ಭಾರತವನ್ನೇ ಫ್ರಾನ್ಸ್‌ನಲ್ಲಿ ಪ್ರತಿನಿಧಿಸಲಿವೆ.

Making a chariot-shaped kite

ಈ ಬಗ್ಗೆ ಮಾತನಾಡಿದ ಟೀಮ್ ಮಂಗಳೂರು ಸದಸ್ಯ ದಿನೇಶ್ ಹೊಳ್ಳ ಅವರು, ನೀರಿನ‌ ಮಹತ್ವ ಸಾರುವ ಮತ್ತು ರಥದ ಮಾದರಿಯ ಗಾಳಿಪಟ ರಚಿಸಿದ್ದೇವೆ. ಗಾಳಿಪಟ ಉದ್ಘಾಟನೆ ದಿನದಂದು ನಾವು ಮಾಡಿದ ಗಾಳಿಪಟ ಹಾರಿಸಲಿದ್ದೇವೆ. ಸುಮಾರು 60 ದೇಶಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ನಾವು ಐದು ಮಂದಿ ಕಳೆದ ಎರಡು ತಿಂಗಳಿಂದ ಈ ಗಾಳಿಪಟ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದರು.


Spread the love

About Laxminews 24x7

Check Also

ಲಕ್ಕಿ ಸ್ಕೀಮ್ ಹೆಸರಲ್ಲಿ ಜನರಿಗೆ ನಂಬಿಸಿ ₹14 ಕೋಟಿಗೂ ಅಧಿಕ ವಂಚನೆ: ನಾಲ್ವರ ಬಂಧನ

Spread the loveಮಂಗಳೂರು: ಲಕ್ಕಿ ಸ್ಕೀಮ್ ಮೂಲಕ ಗ್ರಾಹಕರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚನೆ ಮಾಡಿದ ಎರಡು ಸಂಸ್ಥೆಗಳ ನಾಲ್ವರು ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ